ಬೆಂಗಳೂರು: ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕೂತು ಸುದ್ದಿಯಾಗಿತ್ತು. ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಕೂಡ ಕಾಗೆ ಕಾಟ ಶುರುವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಎಚ್‍ಎಎಲ್ ನೌಕರರ ಜೊತೆಗಿನ ಸಂವಾದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಇಂದು ರಾಹುಲ್ ಗಾಂಧಿ ಆಗಮಿಸಲಿದ್ದು, ಕುಮಾರ ಕೃಪ ಗೆಸ್ಟ್ ಹೌಸ್‍ನಲ್ಲಿ ತಂಗಲಿದ್ದಾರೆ. ಆದರೆ ರಾಹುಲ್ ಬರುವ ದಿನವೇ ಕೆಕೆ ಗೆಸ್ಟ್ ಹೌಸ್‍ನಲ್ಲಿ ಕಾಗೆಯೊಂದು ಸತ್ತಿದ್ದು, ಮರದ ಬಳಿ ನೇತಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸತ್ತ ಕಾಗೆಯನ್ನು ತೆರವುಗೊಳಿಸುವಂತೆ ಎಸ್‍ಪಿಜಿ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ.
ಕಾಗೆ ಕಾರಿನ ಮೇಲೆ ಕುಳಿತ ಬಳಿಕ ಸಿದ್ದರಾಮಯ್ಯನವರು ಕಾರನ್ನು ಬದಲಾಯಿಸಿದ್ದರು. ಕಾಗೆ ಕುಳಿತ ಬಳಿಕ ಕಾರನ್ನು ಬದಲಾಯಿಸಿದ್ದೇ ಎಂದು ಪ್ರಶ್ನೆ ಮಾಡಿದ್ದಕ್ಕೆ ಸಿದ್ದರಾಮಯ್ಯ, ನಾನು ಈ ಮೌಢ್ಯಗಳನ್ನು ನಂಬುವುದಿಲ್ಲ. ಕಾರು ಬಹಳ ಕಿ.ಮೀ ಸಂಚರಿಸಿತ್ತು. ಹೀಗಾಗಿ ಕಾಗೆ ಕುಳಿತುಕೊಳ್ಳುವ ಮೊದಲೇ ಹೊಸ ಕಾರು ಖರೀದಿಗೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಉತ್ತರಿಸಿದ್ದರು.
ಈಗ ರಾಹುಲ್ ಗಾಂಧಿ ಬರುವ ದಿನವೇ ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ಸತ್ತ ಕಾಗೆ ಕಾಣಿಸಿಕೊಂಡಿದೆ. ಹೀಗಾಗಿ ಈ ದೃಶ್ಯವನ್ನು ನೋಡಿದವರು ರಾಹುಲ್ ಗಾಂಧಿಗೆ ಅಪಶಕುನವಾಗುತ್ತಾ? ಕಾಂಗ್ರೆಸ್ ಪಕ್ಷಕ್ಕೆ ಏನೋ ಅಪಶಕುನ ಕಾದಿದ್ಯಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರ ಕೃಪ ಗೆಸ್ಟ್ ಗೌಸ್ ಮುಂದೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಈಗ ಸತ್ತಿರುವ ಕಾಗೆಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.