
ಪುಣೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಮುಕ್ತ ಅವಕಾಶಾ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿದೆ. ಇದರ ಬ್ಬೆನ್ನಲ್ಲೇ ದೇವಾಲಯಕ್ಕೆ ಭೇಟಿ ನೀಡುವುದಾಗಿ ಭೂ ಮಾತಾ ಬ್ರಿಗೇಡ್ ಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ.
ಶೀಘ್ರದಲ್ಲಿಯೇ ಶಬರಿಮಲೆ ದೇವಾಲಯ ಭೇಟಿ ದಿನವನ್ನು ಪ್ರಕಟಿಸುವುದಾಗಿ ತೃಪ್ತಿ ದೇಸಾಯಿ ತಿಳಿಸಿದ್ದಾರೆ. ಮಹಿಳೆಯರ ಗುಂಪಿನೊಂದಿಗೆ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಹೃದಯಪೂರ್ವಕವಾಗಿ ಸ್ವಾಗತಿಸಬೇಕೆಂದು ಮನವಿ ಮಾಡಿದ್ದಾರೆ.
ತೃಪ್ತಿ ದೇಸಾಯಿ ಈಗಾಗಲೇ ಮಹಿಳೆಯರ ವಿರುದ್ಧದ ತಾರತಮ್ಯ ಹೋಗಲಾಡಿಸುವ ನ್ನಿಟ್ಟಿನಲ್ಲಿ ಹಲವಾರು ಹೋರಾಟಗಳನ್ನು ಕೈಗೊಂಡಿದ್ದು, ಅಹಮದ್ ನಗರ ಜಿಲ್ಲೆಯ ಶನಿ ಶಿಂಘ್ನಪುರ ದೇವಾಲಯ, ಕೊಲ್ಲಾಪುರ ಜಿಲ್ಲೆಯ ಮಹಾಲಕ್ಷ್ಮೀ ದೇವಾಲಯ ಮತ್ತು ನಾಸಿಕ್ ಜಿಲ್ಲೆಯ ತ್ರಿಯಂಬಕ್ ಶಿವಾ ದೇವಾಲಯ ಮತ್ತಿತರ ಕಡೆಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.