
ಬೆಂಗಳೂರು,ಅ.13-ಮಹಾಘಟಬಂಧನ ರಾಜ್ಯದಲ್ಲೇ ಹುಟ್ಟಿ ಕರ್ನಾಟಕದಲ್ಲೇ ಅವಸಾನ ಕಂಡಿದೆ. ಸಚಿವ ಎನ್.ಮಹೇಶ್ ರಾಜೀನಾಮೆ ನೀಡಿರುವುದು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.
ಕೇವಲ ಅಧಿಕಾರಕ್ಕಾಗಿ ಹಾವು-ಮುಂಗೂಸಿಯಂತಿದ್ದ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿರುವುದರಿಂದ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ಮಹೇಶ್ ರಾಜೀನಾಮೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಅಸ್ತಿತ್ವದಲ್ಲಿ ಇರುವುದಿಲ್ಲ ಎಂಬುದಕ್ಕೆ ಇದು ನಿದರ್ಶನ ಎಂದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನದಿಂದ ಬಿಎಸ್‍ಪಿ ಈಗಾಗಲೇ ಹೊರಬಂದಿದೆ. ಕಾಂಗ್ರೆಸ್‍ನ ಒಡೆದಾಳುವ ನೀತಿಯನ್ನು ಯಾವುದೇ ಪಕ್ಷಗಳು ಸಹಿಸಿಕೊಳ್ಳುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಇದಕ್ಕೆ ಜೆಡಿಎಸ್ ಕೂಡ ಸದ್ಯದಲ್ಲೇ ಬಲಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ತಿಂಗಳು ಕಳೆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಯಾವ ಸಚಿವರು ಎಲ್ಲಿ ಹೋಗುತ್ತಿದ್ದಾರೆ, ಅವರಿಗೆ ನೀಡಿರುವ ಖಾತೆಗಳೇನು, ಯಾರು ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ, ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎಂಬುದರ ಅರಿವಿಲ್ಲ. ತಮ್ಮ ಸರ್ಕಾರದ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲ ಆರೋಪ ಮಾಡುವುದೇ ಅವರಿಗೆ ಅಭ್ಯಾಸವಾಗಿದೆ ಎಂದು ವ್ಯಂಗ್ಯವಾಡಿದರು.
ಇದುವರೆಗೂ ಮುಖ್ಯಮಂತ್ರಿಗಳು ದೇವಸ್ಥಾನ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನುಳಿದರ್ಧ ಸಮಯದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.
ಶಾಸಕರೊಬ್ಬರು ಅಣೆಕಟ್ಟಿಗೆ ಡೈನಾಮಿಟ್ ಇಡುತ್ತೇನೆ ಎನ್ನುತ್ತಾರೆ. ಇದುವರೆಗೂ ಆ ಶಾಸಕರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಬಾಂಗ್ಲಾ ದೇಶದವರ ಬಗ್ಗೆ ಮುಖ್ಯಮಂತ್ರಿಗಳು ಅನುಕಂಪ ತೋರಿಸುತ್ತಾರೆ. ರಾಮನಗರದಲ್ಲಿ ಎನ್‍ಐಎ ಶಂಕಿತ ಉಗ್ರರನ್ನು ಬಂಧಿಸಿರುವ ಮಾಹಿತಿಯೇ ಮುಖ್ಯಮಂತ್ರಿಗಳಿಗೆ ಇರಲಿಲ್ಲ. ಬಿಜೆಪಿಯಲ್ಲಿರುವ ಆಂತರಿಕ ಚಟುವಟಿಕೆಗಳ ಬಗ್ಗೆಯೇ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ವಿರುದ್ದ ವಾಗ್ದಾಳಿ:
ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಒಂದೊಂದು ಕಡೆ ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಅವರಿಗೆ ಇದರ ಬಗ್ಗೆ ಎಳ್ಳಷ್ಟು ಅರಿವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಎಚ್‍ಎಎಲ್ ನೌಕರರ ಜೊತೆ ಸಂವಾದ ನಡೆಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇವರು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಷ್ಟೆ. ಉಳಿದಂತೆ ಅಲ್ಲಿ ಸಂವಾದ ನಡೆಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.
ಇಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಪೇಲ್ ಯುದ್ಧ ವಿಮಾನವನ್ನು ಖರೀದಿ ಮಾಡಲು ಅಂದಿನ ಸರ್ಕಾರವೇ ತೀರ್ಮಾನಿಸಿತ್ತು. ಒಪ್ಪಂದ ಮಾಡಿಕೊಂಡ ಸರ್ಕಾರ ಇದನ್ನು ಮುಂದುವರೆಸಲಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದ್ದರೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಅಂದಿನ ಸರ್ಕಾರ ಏಕೆ ಖರೀದಿ ಮಾಡಲಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಎಚ್‍ಎಎಲ್‍ನಲ್ಲಿ ನಡೆಸುತ್ತಿರುವ ಸಭೆ ಅಧಿಕೃತವಲ್ಲ. ಅಲ್ಲದೆ ಮಿನಿ ಸ್ಕ್ವೇರ್ ಒಂದು ನಿರ್ಬಂಧಿತ ಪ್ರದೇಶ. ಇಲ್ಲಿ ಸಂವಾದ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದರು.
ಸ್ವಾಗತ:
ರಾಷ್ಟ್ರ ವ್ಯಾಪಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಮೀ ಟು ಅಭಿಯಾನವನ್ನು ಸ್ವಾಗತಿಸಿದ ಅವರು, ಯಾರೇ ಆಗಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಅವರಿಗೆ ನ್ಯಾಯ ಸಿಗಬೇಕು. ಈ ವಿಷಯದಲ್ಲಿ ಪಕ್ಷ ರಾಜಕಾರಣ ಅಗತ್ಯವಿಲ್ಲ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ಸಿಗಬೇಕೆಂಬುದಷ್ಟೇ ನನ್ನ ಒತ್ತಾಯ. ಈ ಅಭಿಯಾನವನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.