ಬೆಂಗಳೂರು,ಅ.13-ಬಿಎಸ್ಪಿ ಪಕ್ಷದ ಶಾಸಕ ಎನ್. ಮಹೇಶ್ ರಾಜೀನಾಮೆ ನೀಡಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಜಕೀಯ ವಿಶ್ಲೇಷಣೆ ಪ್ರಕಾರ, ತಕ್ಷಣಕ್ಕೆ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೂಚಿಸಿದರಷ್ಟೇ ಸರ್ಕಾರ ಬೆಂಬಲಿತ ಶಾಸಕರ ಸಂಖ್ಯೆಯ ಒಂದು ಸ್ಥಾನ ಕಡಿಮೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ನಲ್ಲಿರುವ ಅತೃಪ್ತ ಶಾಸಕರು ಕೈ ಕೊಟ್ಟು ನಂಬರ್ ಗೇಮ್ ರಾಜಕೀಯ ಆರಂಭವಾದರೆ ಆಗ ಮಾತ್ರ ಮಹೇಶ್ ಅವರ ರಾಜೀನಾಮೆ ಮೈತ್ರಿ ಸರ್ಕಾರಕ್ಕೆ ಕಷ್ಟವಾಗಲಿದೆಯಂತೆ.
ಬಿಎಸ್ಪಿ ಶಾಸಕ ಮಹೇಶ್ ಹೊರತುಪಡಿಸಿ ಮತ್ತಿಬ್ಬರು ಪಕ್ಷೇತರರು ಇರುವ ಕಾರಣ, ಮತ್ತೆ ಸರ್ಕಾರ ರಚಿಸಬೇಕೆಂಬ ಬಿಜೆಪಿಯ ನಂಬರ್ ಗೇಮ್ ಲೆಕ್ಕಾಚಾರಕ್ಕೆ ಮುಂದಾದರೆ ಇದು ಉತ್ತಮ ವೇದಿಕೆಯಾಗಲಿದೆ. ಎನ್. ಮಹೇಶ್ ರಾಜೀನಾಮೆಯಿಂದ ಮೈತ್ರಿ ಸರ್ಕಾರದಲ್ಲಿ ಒಂದಷ್ಟು ಗಲಿಬಿಲಿಯಾಗಿರುವುದಂತೂ ಸತ್ಯ.
ಮೈತ್ರಿಗೆ ನಷ್ಟವೇನು?:
ಈಗ ಘೋಷಣೆಯಾಗಿರುವ ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮೈತ್ರಿ ಪಕ್ಷಕ್ಕೆ ಅಡೆತಡೆ ಎದುರಾಗಬಹುದು ಎಂದು ರಾಜಕೀಯ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಇನ್ನು ಮಹಾಘಟಬಂಧನ್ ನಿಂದ ಪ್ರಾದೇಶಿಕ ಪಕ್ಷಕ್ಕೆ ನೆಮ್ಮದಿಯಿಲ್ಲ ಎಂಬುದು ಸಾಬೀತಾದ ತೃಪ್ತಿ ಬಿಜೆಪಿಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ತಗ್ಗಿಸುವ ಕಾರ್ಯತಂತ್ರ ರೂಪಿಸಲು ಬಲ ಬರಲಿದೆ.
ಜೆಡಿಎಸ್ಗೆ ಆಘಾತ:
ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಬಿಎಸ್ಪಿಯ ಎನ್.ಮಹೇಶ್ ನಡೆ ಮೈತ್ರಿ ಪಕ್ಷ ಜೆಡಿಎಸ್ಗೆ ಆಘಾತ ಉಂಟು ಮಾಡಿದೆ.
ರಾಜ್ಯದಲ್ಲಿ 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹೊಸ್ತಿಲಲ್ಲೇ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದಲಿತ ಮತಗಳು ಜೆಡಿಎಸ್ನಿಂದ ದೂರ ಸರಿಯುವ ಆತಂಕ ಎದುರಾಗಿದೆ