ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಎಂ. ಚಂದ್ರಶೇಖರ್ ಗೆ ಟಿಕೆಟ್

ಬೆಂಗಳೂರು: ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಜೆಪಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರ ಪುತ್ರ ಎಂ. ಚಂದ್ರಶೇಖರ್ ಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಒಕ್ಕಲಿಗರ ಭದ್ರ ಕೋಟೆಯಲ್ಲಿ ಮತಗಳನ್ನು ಒಡೆದಾಳುವ ಮೂಲಕ ಜೆಡಿಎಸ್ ಗೆ ಭರ್ಜರಿ ರಣತಂತ್ರ ರೂಪಿಸಿದೆ‌.

ಶನಿವಾರ ರಾತ್ರಿ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇದ್ದಕ್ಕಿದ್ದಂತೆ ಲಿಂಗಪ್ಪನವರ ಪುತ್ರ ಚಂದ್ರಶೇಖರ್ ಅವರನ್ನು ಕಣಕ್ಕೀಳಿಸುವ ತೀರ್ಮಾನ ಕೈಗೊಂಡರು.ತಕ್ಷಣವೇ ಅವರಿಗೆ ಪಕ್ಷದ ಬಿ.ಫಾರಾಂ ನೀಡಲಾಯಿತು. ಸೋಮವಾರ ಚಂದ್ರಶೇಖರ್ ನಾಮಪತ್ರ ಸಲ್ಲಿಸಲಿದ್ದಾರೆ‌.

ಈ ಹಿಂದೆ ರಾಮನಗರ ಕ್ಷೇತ್ರದಿಂದ ಪಕ್ಷದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಿದ್ದರು.ಜೆಡಿಎಸ್ ನಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕೀಳಿಯಲಿದ್ದಾರೆ. ಸೋಮವಾರ ಅವರು ನಾಮಪತ್ರ ಸಲ್ಲಿಕೆ ಮಾಡುವರು.

ಐದು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಚಂದ್ರಶೇಖರ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಅದೇ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಈ ತಂತ್ರ ಅನುಸರಿಸಿದೆ.ಇನ್ನು ರುದ್ರೇಶ್ ಅವರನ್ನು ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ನ ಹಿರಿಯ ಮುಖಂಡರಾಗಿರುವ ಲಿಂಗಪ್ಪನವರು ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಉಪಚುನಾವಣೆಯಲ್ಲಿ ಮಗನನ್ನು ಬೆಂಬಲಿಸಬೇಕೇ ಇಲ್ಲವೇ ಮೈತ್ರಿ ಕೂಟದ ಅಭ್ಯರ್ಥಿಯನ್ನು ಬೆಂಬಲ ಕೊಡಬೇಕೇ ಎಂಬ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ‌. ಈಗಾಗಲೇ ಲಿಂಗಪ್ಪ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮನಗರಕ್ಕೆ ಕಾಂಗ್ರೆಸ್ ವತಿಯಿಂದ ಅಭ್ಯರ್ಥಿ ಕಣಕ್ಕೀಳಿಸುವಂತೆ ಪಕ್ಷದ ಮುಖಂಡರಿಗೆ ಒತ್ತಡ ಹಾಕಿದ್ದಾರೆ.ಹೀಗಾಗಿ ಅವರ ಮುಂದಿನ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ಹಿಂದೆ ತಂದೆ ಜೊತೆ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಚಂದ್ರಶೇಖರ್, ಅಕ್ಟೋಬರ್ 10 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ