ಚೆನ್ನೈ : ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ತಮಿಳುನಾಡಿನ ತಿರುಚಿ ವಿಮಾನನಿಲ್ದಾಣದಲ್ಲಿ ಗೋಡೆಗೆ ಗುದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ವಿಮಾನ ಟೆಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಗಡಿ ಗೋಡೆಗೆ ವಿಮಾನ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ 136 ಪ್ರಯಾಣಿಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಕಳೆದ ರಾತ್ರಿ 1.19ರ ಸಮಯದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಎರಡು ಚಕ್ರಗಳು ಹಾನಿಗೊಳಗಾದ ಹಿನ್ನಲೆ ವಿಮಾನ ನಿಲ್ದಾಣದ ಮಾರ್ಗವನ್ನು ಮುಂಬೈಗೆ ಬದಲಾಯಿಸಲಾಯಿತು. ಮುಂಬಯಿನಿಂದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆ ಬಳಿಕ ಪೈಲಟ್ ಮತ್ತು ಸಹ ಪೈಲಟ್ನನ್ನು ವಜಾಮಾಡಿದ್ದು, ತನಿಖೆಯನ್ನು ಆರಂಭಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು, ವಿಮಾನದ ಅಂಟೆನಾ ಹಾನಿಯಾಗಿದ್ದು, ಮುರಿದುಹೋದ ಕೆಲವು ಭಾಗಗಳು ಪತ್ತೆಯಾಗಿದೆ. ನಾವು ಶೀಘ್ರವಾಗಿ ಮತ್ತೊಂದು ಅಂಟೆನಾವನ್ನು ಅಳವಡಿಸುತ್ತೇವೆ ಎಂದಿದ್ದಾರೆ. ಅಪಘಾತದಿಂದಾಗಿ ವಿಮಾನನಿಲ್ದಾಣದ ಗಡಿ ಗೋಡೆ ಕುಸಿದಿದೆ.