ಬೆಂಗಳೂರು: ಗಾಯಕ ರಘು ದೀಕ್ಷಿತ್ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪತ್ನಿ ಮಯೂರಿ ಉಪಾಧ್ಯಾ ಪ್ರತಿಕ್ರಿಯೆ ನೀಡಿದ್ದು, ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಶಿಕ್ಷೆಯಾಗಲೇಬೇಕು, ಈ ಮೂಲಕವಾದರೂ ಬೇರೆ ಪುರುಷರು ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವ ಧೈರ್ಯ ಹೊಂದುವುದಿಲ್ಲ, ಬೇರೆ ಪುರುಷರಿಗೆ ಇದು ಪಾಠವಾಗಬೇಕು ಎಂದಿದ್ದಾರೆ.
ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಯೂರಿ, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಮುಂದೆ ಬಂದು ಮುಕ್ತವಾಗಿ ತಮ್ಮ ನೋವನ್ನು ತೋಡಿಕೊಳ್ಳುವವರಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಈ ವಿಷಯದಲ್ಲಿ ನಾನು ದೃಢವಾಗಿದ್ದೇನೆ. ಆದರೆ ಮಹಿಳೆಯರಿಗೆ ಈ ವಿಚಾರದಲ್ಲಿ ಅಷ್ಟೊಂದು ಧೈರ್ಯವಿದೆಯೇ ಎಂದು ನನಗೆ ಗೊತ್ತಿಲ್ಲ.
ಇನ್ನು ಗಾಯಕ ರಘು ದೀಕ್ಷಿತ್, ನಾನು ನನ್ನ ಪತ್ನಿಗೆ ವಿಚ್ಛೇದನ ನೀಡುತ್ತಿದ್ದೇನೆ ಆಕೆ ಉತ್ತಮ ಮಹಿಳೆ, ನಾನು ಆಕೆಗೆ ಉತ್ತಮ ಪತಿಯಾಗಲಿಲ್ಲ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಕೂಡ ಪ್ರತಿಕ್ರಿಯಿಸಿರುವ ಮಯೂರಿ ಉಪಾಧ್ಯ, ನನ್ನ ಮದುವೆ ಮತ್ತು ವಿಚ್ಛೇದನ ವಿಷಯ ಇಲ್ಲಿ ಮುಖ್ಯವಲ್ಲ ಮತ್ತು ಸಾಂದರ್ಭಿಕ ಚರ್ಚೆಯ ವಿಷಯ ಕೂಡ ಅಲ್ಲ, ಪತ್ನಿಯಾಗುವುದಕ್ಕಿಂತ ಮೊದಲು ನಾನೊಬ್ಬ ಮಹಿಳೆ. ಅದು ಸೆಲೆಬ್ರಿಟಿಗಳಾಗಿರಲಿ, ಸಾಮಾನ್ಯ ವ್ಯಕ್ತಿಗಳಾಗಿರಲಿ, ಪ್ರತಿಯೊಬ್ಬ ಪ್ರಜೆಯ ಘನತೆ, ಗೌರವ ಮುಖ್ಯವಾಗುತ್ತದೆ. ಲೈಂಗಿಕ ಕಿರುಕುಳದ ಬಗ್ಗೆ ಹೇಳಿರುವ ಘಟನೆಗಳಲ್ಲಿ ಸತ್ಯವೇನು ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ್ ಮಿ ಟೂ ಅಭಿಯಾನದಡಿ ರಘು ದೀಕ್ಷಿತ್ ವಿರುದ್ಧ ಆರೋಪ ಮಾಡಿದ್ದರು.