ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ; 1000 ಅಂಕ ಸೆನ್ಸೆಕ್ಸ್​ ಕುಸಿತ, ಐದೇ ನಿಮಿಷದಲ್ಲಿ 4 ಲಕ್ಷ ಕೋಟಿ ರೂ. ನಷ್ಟ!

ಮುಂಬೈಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಗುರುವಾರ ಬೆಳಗ್ಗೆ ರೂಪಾಯಿ ಮೌಲ್ಯ 25 ಪೈಸೆ ಕುಸಿಯುವ ಮೂಲಕ ಅಮೆರಿಕ ಡಾಲರ್ ಎದುರು ಭಾರತೀಯ ಕರೆನ್ಸಿ 74.46 ರೂ.ಗೆ ಇಳಿದಿದೆ.
ಮುಂಬೈನ ಬಿಎಸ್​ಇ ಸೆನ್ಸೆಕ್ಸ್ 1000ಕ್ಕೂ ಅಂಕಗಳ ಕುಸಿತ ಕಂಡು 34,000ಕ್ಕೂ ಕೆಳಗೆ ಇಳಿದಿದೆ. ಈ ಮೂಲಕ ಕಳೆದ ಆರು ತಿಂಗಳಲ್ಲೇ ಅತ್ಯಂತ ಕೆಟ್ಟ ಸೂಚ್ಯಂಕ ದಾಖಲಿಸಿದೆ. ಅತ್ತ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,000 ಅಂಕಗಳ ಸನಿಹದಲ್ಲಿದೆ.
ಬಿಎಸ್‌ಇ ಹಾಗೂ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಶೇಕಡಾ 2.5ರಷ್ಟು ಇಳಿಕೆ ಕಂಡಿದೆ. ಇದರ ಪರಿಣಾಮ ಹೂಡಿಕೆದಾರರು ಕೇವಲ ಐದು ನಿಮಿಷಗಳಲ್ಲಿ4 ಲಕ್ಷ ಕೋಟಿ ರೂ.ಗಳ ಆಸ್ತಿ ಕಳೆದುಕೊಂಡಿದ್ದಾರೆ. ಏಷ್ಯಾ ಷೇರು ಮಾರುಕಟ್ಟೆಯೂ ಶೇಕಡಾ 5ರಷ್ಟು ಕುಸಿತ ಕಂಡಿದೆ. ಈ ಮುನ್ನ ಕಳೆದ ರಾತ್ರಿ ಅಮೆರಿಕ ಷೇರು ಮಾರುಕಟ್ಟೆಯೂ ಭಾರಿ ಕುಸಿತವನ್ನು ಕಂಡಿತ್ತು.
34,063.82 ಬಿಎಸ್​ಇ ಸೆನ್ಸೆಕ್ಸ್​ ಮತ್ತು 10,169.80 ನಿಫ್ಟಿಯೊಂದಿಗೆ ಗುರುವಾರದ ವಹಿವಾಟು ಆರಂಭಿಸಿದ ಮಾರುಕಟ್ಟೆ ಬೆಳಗ್ಗೆ 9.35ಕ್ಕೆ ಸಾವಿರ ಅಂಕಿ ಸೆನ್ಸೆಕ್ಸ್​ ಕುಸಿತ ಕಂಡು 33,723.53ಕ್ಕೆ, ನಿಫ್ಟಿ 10,138.60ಕ್ಕೆ ಬಂದು ನಿಂತಿತು. ಎಚ್​ಡಿಎಫ್​ಸಿ, ರಿಲಾಯನ್ಸ್​ ಇಂಡಸ್ಟ್ರಿ, ಇನ್​ಫೋಸಿಸ್​, ಐಸಿಐಸಿಐ ಬ್ಯಾಂಕ್​ ಸೆನ್ಸೆಕ್ಸ್​ ಇಳಿಮುಖವಾಗಿದೆ.
ಯುಎಸ್ ಟೆಕ್ ಸ್ಟಾಕ್​ಗಳ ಷೇರುಗಳಲ್ಲಿ ಭಾರೀ ತಿದ್ದುಪಡಿ, ಫೆಡ್ ದರ ಹೆಚ್ಚಳ ಮತ್ತು ಚೀನಾದೊಂದಿಗೆ ಅಮೆರಿಕದ ವ್ಯಾಪಾರ ಯುದ್ಧದ ಪರಿಣಾಮ ಏಷ್ಯಾದ ಹಲವು ಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿವೆ. ಅಲ್ಲದೇ, ಅಮೆರಿಕದ 10 ವರ್ಷದ ಖಜಾನೆ ಬಾಂಡ್​ಗಳು ಕಳೆದ ವಾರ ಶೇ.3ರಷ್ಟು ಏರಿಕೆಯಾಗಿರುವುದು ಸ್ಥಳೀಯ ಕರೆನ್ಸಿಗಳ ಕುಸಿತಕ್ಕೆ ಕಾರಣವಾಗಿದೆ.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆ ಹೊರಹರಿವು ಹೆಚ್ಚಿದ ಪರಿಣಾಮ ರೂಪಾಯಿ ಮೌಲ್ಯ ನಿರಂತರ ಕುಸಿಯುತ್ತಿದೆ. ಅಲ್ಲದೇ, ಆರ್​ಬಿಐ ದ್ವೈಮಾಸಿಕ ಹಣಕಾಸು ಪರಾಮರ್ಶೆ ವೇಳೆ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದು, ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.
ಅಕ್ಟೋಬರ್ 11 ರಂದು ಸರ್ಕಾರಿ ಬಾಂಡ್​ಗಳನ್ನು ಖರೀದಿಸುವ ಮೂಲಕ ಆರ್​ಬಿಐ 120 ಬಿಲಿಯನ್ ಡಾಲರ್​ ಹಣವನ್ನು ಆರ್ಥಿಕತೆಗೆ ಸೇರಿಸಿಕೊಳ್ಳಲು ನಿರ್ಧರಿಸಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂಬುದು ಟ್ರೇಡರ್​ಗಳ ಅಭಿಪ್ರಾಯವಾಗಿದೆ.
ಬುಧವಾರದ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ 18 ಪೈಸೆ ಏರಿಕೆಯೊಂದಿಗೆ ಸ್ಥಳಿಯ ಕರೆನ್ಸಿ 74.21 ರೂಪಾಯಿಗೆ ಕುಸಿದಿತ್ತು.  ದಿನದ ಆರಂಭದಲ್ಲಿ 18 ಪೈಸೆ ಮೌಲ್ಯ ಏರಿಕೆಯಾಗಿತ್ತಾದರೂ, ದಿನದ ಕೊನೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಬೆಲೆ ಗಮನಾರ್ಹ ಏರಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯ ಕುಸಿತ ಕಂಡಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ