ಕಲಾಸಿಪಾಳ್ಯದ ಅವಸ್ಥೆ ಕಂಡು ದಂಗಾದ ಮೇಯರ್ ಗಂಗಾಂಬಿಕೆ

ಬೆಂಗಳೂರು, ಅ.11- ರಸ್ತೆ ಮಧ್ಯೆದಲ್ಲೇ ಬಸ್ ನಿಲುಗಡೆ, ಎಲ್ಲೆಲ್ಲೂ ಕಸದ ರಾಶಿ, ಪಾದಚಾರಿ ಮಾರ್ಗದಲ್ಲೇ ಲಗೇಜ್…. ಇವು ನಗರದ ಕಲಾಸಿಪಾಳ್ಯದ ದೃಶ್ಯ.
ಇಂದು ಬೆಳಗ್ಗೆ ಕಲಾಸಿಪಾಳ್ಯದಲ್ಲಿ ಪರಿಶೀಲನೆ ಕೈಗೊಂಡ ವೇಳೆ ಈ ದೃಶ್ಯಗಳನ್ನು ಕಂಡು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಒಂದು ಕ್ಷಣ ದಂಗಾದರು.
ಏನಿದು ಅವ್ಯವಸ್ಥೆ, ರಸ್ತೆ ಮಧ್ಯೆ ಬಸ್ ನಿಲ್ಲಿಸಿದ್ದರೂ ಸುಮ್ಮನಿದ್ದೀರಿ. ಎಲ್ಲೆಲ್ಲೂ ತ್ಯಾಜ್ಯದ ರಾಶಿ ಗಬ್ಬು ನಾರುತ್ತಿದೆ. ಪಾದಚಾರಿ ಮಾರ್ಗ ಒತ್ತುವರಿಯಾಗಿದೆ ಎಂದು ಅಧಿಕಾರಿಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.

ಫುಟ್‍ಪಾತ್ ಮೇಲೆ ಲಗೇಜ್ ಇಟ್ಟಿದ್ದಕ್ಕೆ ದಂಡವಿದಿಸಿದರೆ, ಕೆಜಿಎನ್ ರೋಡ್‍ಲೈನ್‍ಗೆ 10ಸಾವಿರ ರೂ. ದಂಡ ವಿಧಿಸಲಾಯಿತು. ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಕಲಾಸಿಪಾಳ್ಯದ ಬಸ್ ನಿಲ್ದಾಣದಲ್ಲಿ ಬಿಎಂಟಿಸಿಯವರು ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಕಸ ಹಾಕಲು ಜಾಗದ ಸಮಸ್ಯೆ ಇತ್ತು. ಈಗ ಅದನ್ನೆಲ್ಲಾ ಸರಿಪಡಿಸಲಾಗುವುದು ಎಂದರು.

ಕಲಾಸಿಪಾಳ್ಯ ಮಾರುಕಟ್ಟೆಯನ್ನು ನಿರ್ವಹಣೆ ಮಾಡಲು ಎಪಿಎಂಸಿಗೆ ನೀಡಲಾಗಿತ್ತು. ಈಗ ಎಪಿಎಂಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸ್ವಚ್ಛತೆ ಮಾಡಿಸುವಂತೆ ಹೇಳಿದ್ದೇನೆ ಎಂದು ತಿಳಿಸಿದರು.

ಪಾದಚಾರಿ ಮಾರ್ಗದಲ್ಲಿ ಯಾವುದೇ ವಾಹನಗಳು ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದ ಅವರು, ಈ ಭಾಗದಲ್ಲಿ ಎಲ್ಲಾ ಕಡೆ ಸಿಸಿ ಟಿವಿ ಅಳವಡಿಸುವ ಕುರಿತು ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಕಲಾಸಿಪಾಳ್ಯದ ಸುತ್ತಮುತ್ತ ಮೇಯರ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ