ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ ಸೇವೆಗಳನ್ನು ಗ್ರಾಹಕರಿಗೆ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ ಹಿನ್ನಲೆಯಲ್ಲಿ ಗೂಗಲ್ ಪ್ಲಸ್ ಸೇವೆ ಬಂದ್ ಮಾಡುವುದಾಗಿ ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ಘೋಷಣೆ ಮಾಡಿದೆ.
ಪೇಸ್ ಬುಕ್’ಗೆ ಪೈಪೋಟಿ ನೀಡುವ ಸಲುವಾಗಿ ಆರಂಭಿಸಲಾಗಿದ್ದ ಗೂಗಲ್ ಪ್ಲಸ್ ನಲ್ಲಿ ಕಾಣಿಸಿಕೊಂಡ ಬಗ್ ನಿಂದಾಗಿ ಮಾಹಿತಿ ಸೋರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸೇವೆಯನ್ನು ಸೋಮವಾರದಿಂದ ಬಂದ್ ಮಾಡುತ್ತಿರವುದಾಗಿ ಗೂಗಲ್ ತಿಳಿಸಿದೆ.
ಗೂಗಲ್ ಪ್ಲಸ್ ನಿರ್ವಹಣೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದರಿಂದ ಮತ್ತು ಜನರು ಇದನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರಿಂದ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೂಗಲ್ ವಕ್ತಾರರರು ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿಯೇ ಗೂಗಲ್ ಪ್ಲಸ್ ಸಾಫ್ಟ್’ವೇರ್ ನಲ್ಲಿ ಬಗ್ ಇರುವುದು ಗೂಗಲ್ ಕಂಪನಿಗೆ ತಿಳಿದಿತ್ತು. ಆದರೆ, ನಿಯಂತ್ರಕ ಸಂಸ್ಥೆಗಳ ಭಯದಿಂದ ಹೊರಜಗತ್ತಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ.
ಈ ಮಾಹಿತಿ ಬಹಿರಂಗಗೊಂಡ ನಂತರ ಗೂಗಲ್‌ನ ಮಾತೃ ಕಂಪನಿ ‘ಆಲ್ಫಾಬೆಟ್ ಇಂಕ್’ನ ಷೇರುಗಳ ಮೌಲ್ಯ ಶೇ1.5ರಷ್ಟು ಕುಸಿಯಿತು. ಅಮೆರಿಕದ ಬೃಹತ್ ತಂತ್ರಜ್ಞಾನ ಕಂಪನಿಗಳನ್ನು ಖಾಸಗಿ ಮಾಹಿತಿ ಸೋರಿಕೆ ವಿಚಾರ ಒಂದು ಶಾಪವಾಗಿ ಕಾಡುತ್ತಿದೆ. ಗೂಗಲ್ ಇದಕ್ಕೆ ಹೊಸ ಸೇರ್ಪಡೆಯಷ್ಟೇ. ಕಾನೂನು ಕ್ರಮದ ಭಯದಿಂದಾಗಿ ‘ಎಪಿಐ’ನಲ್ಲಿ (ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್‌ಫೇಸ್) ಪತ್ತೆಯಾಗಿದ್ದ ದತ್ತಾಂಶ ಸೋರಿಕೆ ವಿಚಾರವನ್ನು ಗೌಪ್ಯವಾಗಿ ಇರಿಸಲು ಗೂಗಲ್ ಪ್ರಯತ್ನಿಸಿತ್ತು ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ದತ್ತಾಂಶ ಸೋರಿಕೆಯ ಕಾರಣ, ಎಂಥ ಮಾಹಿತಿ ಸೋರಿಕೆಯಾಗಿರಬಹುದು ಎಂಬುದನ್ನು ಪತ್ತೆಹಚ್ಚಲಾಗಿದೆ. ದತ್ತಾಂಶ ಸೋರಿಕೆಗೆ ಕಾರಣವಾಗಿದ್ದ ದೋಷವನ್ನೂ ಸರಿಪಡಿಸಲಾಗಿದೆ. ದತ್ತಾಂಶ ಸೋರಿಕೆಯಾದ ಬಳಕೆದಾರರನ್ನು ನಿರ್ದಿಷ್ಟವಾಗಿ ಗುರುತಿಸಿ ಮಾಹಿತಿ ನೀಡುವುದು, ದತ್ತಾಂಶವನ್ನು ದುರುಪಯೋಗಪಡಿಸಿಕೊಂಡಿರುವ ಡೆವಲಪರ್‌ಗಳನ್ನು ಗುರುತಿಸಿ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯನ್ನು ಗೂಗಲ್‌ನ ಆಡಳಿತ ಮಂಡಳಿ ಆಲೋಚಿಸಿತ್ತು. ದತ್ತಾಂಶ ಸೋರಿಕೆಯ ಸಾಧ್ಯತೆಯನ್ನು ಯಾವುದೇ ಡೆವಲಪರ್ ಗುರುತಿಸಿದ್ದಾರೆ ಎಂದಾಗಲಿ, ದತ್ತಾಂಶವನ್ನು ನಕಲು ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದಾಗಲಿ ಹೇಳಲು ಯಾವುದೇ ಸಾಕ್ಷಿ ಲಭ್ಯವಿಲ್ಲ’ ಎಂದು ಗೂಗಲ್ ಹೇಳಿದೆ.