
ಹೊಸದಿಲ್ಲಿ: ಜಗತ್ತು ಅಳಿವಿನಂಚಿಗೆ ಬರುತ್ತಿದೆಯಾ? ಮಾಡಿದುಣ್ಣೋ ಮಾರಾಯ ಎಂಬಂತೆ ಮಾನವನ ಪಾಪ ಕೃತ್ಯಗಳಿಗೆ ಬೆಲೆ ತೆರಬೇಕಾದ ಸಂದರ್ಭ ಸಮೀಪಿಸುತ್ತಿದೆಯಾ? ದೊಡ್ಡ ಗಂಡಾಂತರ ಹತ್ತಿರದಲ್ಲೇ ಇದೆಯಾದರೂ ಕಾಲ ಇನ್ನೂ ಪೂರ್ತಿ ಮಿಂಚಿಲ್ಲ. ಮನುಷ್ಯ ಈಗ ಎಚ್ಚೆತ್ತುಕೊಂಡರೆ ಬಚಾವ್ ಆಗಬಹುದು. ಆದರೆ, ಜಗತ್ತಿನ ದೇಶಗಳ ಉದಾಸೀನತೆ ನೋಡಿದರೆ ಬದುಕುವ ಮಾರ್ಗ ಕಿರಿದಾಗುವುದು ನಿಶ್ಚಿತವೆಂಬಂತಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಮನುಷ್ಯ ತಾನು ನಿರ್ನಾಮವಾಗುವುದಲ್ಲದೆ ಭೂಮಿಯಲ್ಲಿ ಇದ್ಯಾವುದರ ಪರಿವೆಯೇ ಇಲ್ಲದೆ ಬದುಕುತ್ತಿರುವ ಇತರ ಜೀವಿಗಳ ಜೀವಕ್ಕೂ ಮನುಷ್ಯನ ಪಾಪಗಳು ಸುತ್ತಿಕೊಳ್ಳುವುದು ಮಾತ್ರ ವಿಚಿತ್ರ..!
ಏನಿದು ಸಮಸ್ಯೆ?
ಗ್ಲೋಬಲ್ ವಾರ್ಮಿಂಗ್, ಅಥವಾ ಜಾಗತಿಕ ತಾಪಮಾನದ ಬಗ್ಗೆ ನೀವು ಕೇಳಿರುತ್ತೀರಿ. ಭೂಮಿಯ ವಾತಾವರಣ ಬಿಸಿಯಾಗುವುದನ್ನೇ ಗ್ಲೋಬಲ್ ವಾರ್ಮಿಂಗ್ ಎನ್ನುತ್ತಾರೆ. ಇದೀಗ ಭೂಮಿಯ ತಾಪಮಾನವು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದೆಯಂತೆ. ಅಂತರ್ದೇಶೀಯ ಹವಾಮಾನ ವೈಪರೀತ್ಯ ಸಮಿತಿ(ಐಪಿಸಿಸಿ)ಯು ಗ್ಲೋಬಲ್ ವಾರ್ಮಿಂಗ್ನ ಕಟು ವಾಸ್ತವ ಸ್ಥಿತಿಯ ಬಗ್ಗೆ ಬೆಚ್ಚಿಬೀಳಿಸುವ ವರದಿ ನೀಡಿದೆ. ಈಗಿನಂತೆಯೇ ಔದಾಸೀನ್ಯತೆ ಮುಂದುವರಿದದ್ದೇ ಆದಲ್ಲಿ ಮುಂದಿನ 10-15 ವರ್ಷಗಳಲ್ಲಿ ಅರ್ಧ ಡಿಗ್ರಿ ಸೆಲ್ಷಿಯಸ್ನಷ್ಟು ಭೂಮಿಯ ತಾಪಮಾನ ಏರಿಕೆ ಆಗಬಹುದು ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.
ಈಗಿರುವ ತಾಪಮಾನಕ್ಕಿಂತ ಅರ್ಧ ಡಿಗ್ರಿ ಸೆಲ್ಷಿಯಸ್ನಷ್ಟು ಉಷ್ಣಾಂಶ ಏರಿಕೆಯಾದರೆ ಭೂಮಿಯ ಹವಾಮಾನದಲ್ಲಿ ಭಾರೀ ವೈಪರೀತ್ಯ ಸಂಭವಿಸುತ್ತದೆ. ಸಮುದ್ರ ನೀರಿನ ಮಟ್ಟ ಏರುತ್ತದೆ. ಕಡಲ ತೀರದಾದ್ಯಂತ ಅನೇಕ ಪ್ರದೇಶಗಳು ನೀರಲ್ಲಿ ಮುಳುಗಡೆಯಾಗಬಹುದು. ವಿಪರೀತ ಬಿಸಿಗಾಳಿ, ಭೂಕಂಪ, ಸುನಾಮಿ, ಚಂಡಮಾರುತ, ಕಡಲ್ಕೊರೆತ ಇತ್ಯಾದಿ ನೈಸರ್ಗಿಕ ದುರಂತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿರುತ್ತದೆ.
ಉಷ್ಣಾಂಶ ಏರಿಕೆಯಿಂದ ಅಂಟಾರ್ಟಿಕಾ ಮೊದಲಾದೆಡೆ ಇರುವ ಹಿಮಹಾಸುಗಳು ಕರಗಬಹುದು. ಇವು ಕರಗಿ ನೀರಾಗಿ ಬಿಟ್ಟರೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಈ ನೀರನ್ನು ಕಡಿಮೆ ಮಾಡುವ ಪ್ರಶ್ನೆಯೇ ಇರುವುದಿಲ್ಲ. ಒಡೆದ ಕನ್ನಡಿಯ ಗಾಜುಗಳನ್ನ ಜೋಡಿಸಲು ಹೇಗೆ ಸಾಧ್ಯವಿಲ್ಲವೋ, ಈ ಹಿಮಹಾಸುಗಳ ಮರುನಿರ್ಮಾಣ ಆಗುವುದಿಲ್ಲ.
ಹಾಗೆಯೇ ಉಷ್ಣಾಂಶ ಏರಿಕೆಯಿಂದ ಸಮುದ್ರ ಪಾಚಿ ಅಥವಾ ಹವಳದ ದಂಡೆ ಎಂದು ಕರೆಯುವ ಕೋರಲ್ ರೀಫ್ ಪ್ರದೇಶಗಳೂ ಕೂಡ ನಾಶವಾಗುತ್ತವೆ. ಸಮುದ್ರದ ಆರ್ಭಟವನ್ನು ನಿಯಂತ್ರಣದಲ್ಲಿಡಲು ಈ ಕೋರಲ್ ರೀಫ್ಗಳ ಅಸ್ತಿತ್ವ ಬಹಳ ಮುಖ್ಯ. ಸಮುದ್ರ ದಂಡೆಯ ಸಮಿಪವಿರುವ ಈ ರೀಫ್ ಅಥವಾ ಪಾಚಿಯು ಸಾಗರದಲೆಗಳ ಬಲವನ್ನು ಕಡಿಮೆ ಮಾಡುತ್ತದೆ. ಸುನಾಮಿಯು ದಂಡೆಗೆ ಅಪ್ಪಳಿಸುವ ಮುನ್ನವೇ ಅದರ ಬಲವನ್ನು ಈ ಕೋರಲ್ ರೀಫ್ಗಳು ತಗ್ಗಿಸಬಲ್ಲುದು. ಅಲ್ಲದೇ ಕೋರಲ್ ರೀಫ್ನಲ್ಲಿ ಅಮೂಲ್ಯ ಜೀವ ವೈವಿಧ್ಯತೆ ಇದೆ. ವಿಶ್ವದ ಅತ್ಯಂತ ಜೀವ ವೈವಿಧ್ಯತೆಯ ಪ್ರದೇಶಗಳಲ್ಲಿ ಈ ಕೋರಲ್ ರೀಫ್ಗಳೂ ಒಳಗೊಂಡಿವೆ. ಸಾಗರದೊಳಗಿನ ಅನೇಕ ಜೀವ ಪ್ರಭೇದಗಳಿಗೆ ಇದು ಆವಾಸ ಸ್ಥಾನವೂ ಹೌದು. ಹಾಗೆಯೇ ಮನುಷ್ಯರ ಆಹಾರವಾಗಿರುವ ಬಹುತೇಕ ಮೀನುಗಳು ಸಿಕ್ಕುವುದು ಈ ಪ್ರದೇಶಗಳಲ್ಲೇ. ಹೀಗಾಗಿ, ಕೋರಲ್ ರೀಫ್ನ ಅಸ್ತಿತ್ವ ಬಹಳ ಮುಖ್ಯ. ಜಾಗತಿಕ ತಾಪಮಾನ ಏರಿಕೆಯಿಂದ ಕೋರಲ್ ರೀಫ್ನ ಅಸ್ತಿತ್ವಕ್ಕೆ ಧಕ್ಕೆಯಾಗುವಂತಹ ಸ್ಥಿತಿ ಇದೆ. ಈಗಾಗಲೇ ಹಲವು ಕಡೆ ಕೋರಲ್ ರೀಫ್ಗಳು ನಾಶವಾಗುತ್ತಿರುವ ವರದಿ ಬರುತ್ತಿರುವುದ ಆತಂಕದ ವಿಷಯ.
ಈಗೆಷ್ಟಿದೆ ಉಷ್ಣಾಂಶ?
ಐದು ವರ್ಷಗಳ ಹಿಂದೆ ನಾಸಾ ಒದಗಿಸಿದ ಮಾಹಿತಿ ಪ್ರಕಾರ ಭೂಮಿಯ ಜಾಗತಿಕ ತಾಪಮಾನವು 14.6 ಡಿಗ್ರಿ ಸೆಲ್ಷಿಯಸ್ ಇದೆ. 19ನೇ ಶತಮಾನದಲ್ಲಿ ಆದ ಕೈಗಾರಿಕಾ ಕ್ರಾಂತಿ ಆಯಿತು. ಆ ಸಂದರ್ಭದಲ್ಲಿ ಭೂಮಿಯ ತಾಪಮಾನ ಸುಮಾರು 13.6 ಡಿಗ್ರಿ ಇತ್ತೆನ್ನಲಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ಜನಜೀವನ ಮತ್ತು ಉದ್ಯಮಗಳ ಬದಲಾವಣೆಯಿಂದಾಗಿ ತಾಪಮಾನದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಆಗಿನಿಂದ ಇಲ್ಲಿಯವರೆಗೆ 1 ಡಿಗ್ರಿ ಸೆಲ್ಷಿಯಸ್ನಷ್ಟು ಉಷ್ಣಾಂಶ ಏರಿಕೆಯಾಗಿದೆ.
ಜೀವಿಯ ಅಸ್ತಿತ್ವಕ್ಕೆ ಭೂಮಿಯಲ್ಲಿ ಒಂದಿಷ್ಟು ಉಷ್ಣಾಂಶ ಇರುವುದು ಅತ್ಯಗತ್ಯ. ಒಂದು ವೇಳೆ ಉಷ್ಣಾಂಶವು ಸೊನ್ನೆಯಾಗಿದ್ದರೆ ಇಡೀ ಭೂಮಿಯು ನೀರ್ಗಲ್ಲು, ಮಂದುಗಡ್ಡೆಗಳಿಂದಲೇ ಕೂಡಿರುತ್ತಿತ್ತು. ಆದರೆ, ಉಷ್ಣಾಂಶ ಅತಿಯಾಗಿ ಹೆಚ್ಚಾದರೂ ಪ್ರಳಯಗಳು ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ.
ಜಾಗತಿಕ ತಾಪಮಾನ ಏರಿಕೆಗೆ ಕಾರ್ಬನ್ ಡೈ ಆಕ್ಸೈಡ್ ಪ್ರಮುಖ ಕಾರಣ. ಈಗ ಕೈಗಾರಿಕೆಗಳಷ್ಟೇ ಅಲ್ಲ, ಹಸಿರು ನಾಶ, ವಾಹನಗಳ ಮಾಲಿನ್ಯ ಇತ್ಯಾದಿ ಕಾರಣಗಳಿಂದಾಗಿ ವಾತಾವರಣಕ್ಕೆ ರವಾನೆಯಾಗುತ್ತಿರುವ ಇಂಗಾಲದ ಪ್ರಮಾಣ ಹೆಚ್ಚಾಗಿದೆ. ಹೀಗೇ ಮುಂದುವರಿದರೆ 2030ರಿಂದ 2052ರ ಅವಧಿಯೊಳಗೆ ಅರ್ಧ ಡಿಗ್ರಿ ಸೆಲ್ಷಿಯಸ್ನಷ್ಟು ತಾಪಮಾನ ಏರಿಕೆಯಾಗುವುದು ನಿಶ್ಚಿತವೆನ್ನುತ್ತದೆ ಅಂತರ್ದೇಶೀಯ ಹವಾಮಾನ ವೈಪರೀತ್ಯ ಸಮಿತಿ(ಐಪಿಸಿಸಿ)ಯ ವರದಿ.
ಜಾಗತಿಕ ತಾಪಮಾನದ ಸಮಸ್ಯೆಯನ್ನು ಎದುರಿಸಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಒಟ್ಟಾಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ 2015ರಲ್ಲಿ ಪ್ಯಾರಿಸ್ನಲ್ಲಿ ಐತಿಹಾಸಿಕ ಒಪ್ಪಂದವಾಯಿತು. ಆದರೆ, ಕೆಲ ರಾಷ್ಟ್ರಗಳ ಅನಾಸಕ್ತಿಯಿಂದಾಗಿ ಈ ಒಪ್ಪಂದದ ಕೆಲ ಪ್ರಬಲ ಅಂಶಗಳು ಸಡಿಲಗೊಂಡಿವೆ. ಭೂಮಿಯ ಹಸಿರು ಹೊದಿಕೆಯನ್ನು ಉಳಿಸಿಕೊಳ್ಳುವುದು; ಮಾಲಿನ್ಯ ಹೊರಸೂಸುವಿಕೆಯನ್ನು ನಿಗ್ರಹಿಸುವುದು; ಸೌದೆ, ಇದ್ದಿಲು ಇತ್ಯಾದಿ ಬಳಕೆ ನಿಲ್ಲಿಸುವುದು ಇವೇ ಮುಂತಾದ ಕ್ರಮಗಳನ್ನು ಈ ಒಪ್ಪಂದದಲ್ಲಿ ಶಿಫಾರಸು ಮಾಡಲಾಗಿದೆ.
2030ರಷ್ಟರಲ್ಲಿ ಕಾರ್ಬನ್ ಹೊರಸೂಸುವಿಕೆಯ ಮಟ್ಟದಲ್ಲಿ ಶೇ. 45ರಷ್ಟು ಇಳಿಕೆಯಾಗಲೇಬೇಕು. 2050ರಷ್ಟರಲ್ಲಿ ಇದು ಶೂನ್ಯಕ್ಕೆ ಬಂದು ನಿಲ್ಲಬೇಕು. ಇಲ್ಲದಿದ್ದರೆ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಐಪಿಸಿಸಿಯ ಈ ವರದಿ ಎಚ್ಚರಿಸಿದೆ. ಒಟ್ಟು 40 ದೇಶಗಳ 91 ಪರಿಣಿತರು ಈ ವರದಿಯನ್ನು ರಚಿಸಿದ್ದಾರೆ.
ಭಾರತಕ್ಕೆ ಗಂಡಾಂತರ:
ಜಾಗತಿಕ ತಾಪಮಾನ ಏರಿಕೆಯಿಂದ ಸಂಭವಿಸುವ ದುರಂತಗಳು ಭಾರತದಲ್ಲಿ ಹೆಚ್ಚು ಭೀಕರವಾಗಿರಲಿವೆ. ಯಾಕೆಂದರೆ ಭಾರತದಲ್ಲಿ ಗುಜರಾತ್ನಿಂದ ಆರಂಭವಾಗಿ ಕೇರಳದವರೆಗೂ ಹಾಗೂ ಅಲ್ಲಿಂದ ಆಂಧ್ರದ ಮೂಲಕ ಪಶ್ಚಿಮ ಬಂಗಾಳದವರೆಗೂ ಸಾವಿರಾರು ಕಿಲೋಮೀಟರ್ನಷ್ಟು ಸಮುದ್ರ ತೀರವಿದೆ. ಸಾಗರದ ನೀರಿನ ಮಟ್ಟ ಏರಿಕೆಯಾದರೆ ಈ ಕರಾವಳಿ ಭಾಗಗಳು ಜಲಾವೃತಗೊಳ್ಳುವ ಅಪಾಯವಿದ್ದೇ ಇದೆ.
ಹಾಗೆಯೇ, ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತಕ್ಕೆ ಈ ಜಾಗತಿಕ ತಾಪಮಾನದ ಸಮಸ್ಯೆ ಎದುರಿಸಲು ಬೇಕಾದ ಸಂಪನ್ಮೂಲದ ಕೊರತೆ ಇದೆ. ಅಮೆರಿಕ ಮೊದಲಾದ ಮುಂದುವರಿದ ರಾಷ್ಟ್ರಗಳು ತಮ್ಮಲ್ಲಿರುವ ಸಂಪನ್ಮೂಲಗಳನ್ನ ಬಳಸಿಕೊಂಡು ಒಂದಷ್ಟು ಬಂದೋಬಸ್ತು ಮಾಡಿಕೊಳ್ಳಬಹುದು. ಆದರೆ, ಭಾರತದಂಥ ಬಡ ದೇಶಗಳಿಗೆ ಇದು ಕಷ್ಟ ಕಷ್ಟ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು.