ಬೆಂಗಳೂರು, ಅ.9- ಇಪ್ಪತ್ತೊಂದು ಗ್ರಾಮಗಳ 242 ಸರ್ವೆ ನಂಬರ್ಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಸಿದ್ಧವಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಇಂದಿಲ್ಲಿ ತಿಳಿಸಿದರು.
ಆದರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲು ಕಂದಾಯ ಇಲಾಖೆಯವರು ಮೊದಲು ಮಾರ್ಕಿಂಗ್ ಮಾಡಿಕೊಡಬೇಕು. ಮಾರ್ಕಿಂಗ್ ಮಾಡಿಕೊಡುವಂತೆ ಈಗಾಗಲೇ ಪತ್ರ ಬರೆದಿದ್ದೇವೆ. ಅದು ಕೈ ಸೇರಿದ ಕೂಡಲೇ ಒತ್ತುವರಿ ತೆರವು ಕಾರ್ಯ ಚುರುಕುಗೊಳಿಸುತ್ತೇವೆ ಎಂದರು.
ಕೆಲವು ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಎಲ್ಲೆಲ್ಲಿ ಮಳೆ, ಅನಾಹುತ ಸಂಭವಿದೆಯೋ ಅದಕ್ಕೆ ರಾಜಕಾಲುವೆ ಒತ್ತುವರಿ ಕಾರಣ. ಹಾಗಾಗಿ ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಿ ಎಂದು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ 10 ಸರ್ವೆಯರ್ಗಳನ್ನು ನೇಮಕ ಮಾಡಿ ಎಲ್ಲೆಲ್ಲೆ ಒತ್ತುವರಿಯಾಗಿದೆ ಎಂಬ ಬಗ್ಗೆ ವರದಿ ನೀಡಲು 15 ದಿನಗಳ ಗಡುವು ನೀಡಲಾಗಿತ್ತು.
ಒತ್ತುವರಿ ಪತ್ತೆ ಕಾರ್ಯ ಕೈಗೊಂಡ ಸರ್ವೆಯರ್ಗಳು 21 ಗ್ರಾಮಗಳಲ್ಲಿ 242 ಸರ್ವೆ ನಂಬರ್ಗಳಲ್ಲಿ ಒತ್ತುವರಿಯಾಗಿದೆ ಎಂದು ಸರ್ವೆ ವರದಿ ನೀಡಿದ್ದಾರೆ.
ಆದರೆ ಎಲ್ಲಿ ಒತ್ತುವರಿಯಾಗಿದೆ. ಎಲ್ಲೆಲ್ಲಿ ತೆರವು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ಕಂದಾಯ ಇಲಾಖೆಗೆ ಇನ್ನೊಂದು ಪತ್ರ ಬರೆದು ಒತ್ತುವರಿಯಾಗಿರುವ ಪ್ರದೇಶಗಳ ಬಗ್ಗೆ ಮಾರ್ಕಿಂಗ್ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಮಾರ್ಕಿಂಗ್ ಬಗ್ಗೆ ಪತ್ರ ಕೈ ಸೇರಿದ ಕೂಡಲೇ ಯಾವುದೇ ಮುಲಾಜಿಗೆ ಒಳಗಾಗದೆ ರಾಜಕಾಲುವೆ ತೆರವುಗೊಳಿಸಲಾಗುವುದು ಎಂದು ಶಿವರಾಜ್ ಸ್ಪಷ್ಟಪಡಿಸಿದರು.