
ಬೆಂಗಳೂರು,ಅ.9- ಯಲಹಂಕದಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ ವತಿಯಿಂದ ಸಮಗ್ರ ಆಯುಷ್ ಚಿಕಿತ್ಸೆ ಮತ್ತು ಸಲಹಾ ಕಾರ್ಯಕ್ರಮ (ಐಎಟಿಸಿಪಿಝೆಡ್)ವನ್ನು ಡಿಸೆಂಬರ್ 14ರಿಂದ 30ರವರೆಗೆ ನಗರದಾದ್ಯಂತ ಐದು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಯೋಗಿ ದೇವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಚೀನ ವೈದ್ಯಕೀಯ ಪದ್ದತಿಗಳಾದ ಆರ್ಯುವೇದ, ಯೋಗ, ನ್ಯಾಚುರೋಪತಿ, ಹೋಮಿಯೋಪತಿ, ಯುನಾನಿ, ಸಿದ್ದ, ವಾಸಿ ಮುಂತಾದ ಹಲವಾರು ಚಿಕಿತ್ಸಾ ವಿಧಾನಗಳನ್ನು ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತರಬೇತಿ, ಬೋಧನೆ, ಅಭ್ಯಾಸ ಶಿಬಿರವನ್ನು ನಾಗರಿಕ ಜನತೆ ಎದುರಿಸುತ್ತಿರುವ ಬಿಪಿ, ಸಕ್ಕರೆ ಕಾಯಿಲೆ, ಬೊಜ್ಜು, ಬೆನ್ನು, ನೋವು, ಕೀಲುನೋವು, ಖಿನ್ನತೆ, ಆತಂಕ, ಮೈಗ್ರೇನ್, ಅಸ್ತಮಾ, ಥೈರಾಯ್ಡ್, ಅಲರ್ಜಿ, ನಪುಂಸಕತೆ, ಮಲಬದ್ಧತೆ, ವೈವಾಹಿಕ ಸಮಸ್ಯೆಗಳು ಸೇರಿದಂತೆ ಇನ್ನಿತರೆ ಸಮಸ್ಯೆಗಳು ಬರುವುದನ್ನು ನಿಯಂತ್ರಿಸುವ ವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.
ಇದರ ಜೊತೆಗೆ ಯೋಗ, ಸಂಗೀತ ಚಿಕಿತ್ಸೆ, ಡ್ಯಾನ್ಸ್, ಥೆರಪಿ, ಮುದ್ರಾ ಥೆರಪಿ, ನರ ವಿಶ್ಲೇಷಣೆ ತರಬೇತಿ ಸೇರಿದಂತೆ ಮುಂತಾದ ಚಿಕಿತ್ಸಾ ವಿಧಾನಗಳ ಬಗ್ಗೆ ಪರಿಚಯಿಸಲಾಗುತ್ತದೆ ಎಂದು ತಿಳಿಸಿದರು.
ಯೋಗ ಗಂಗೋತ್ರಿ ಟ್ರಸ್ಟ್ ದಕ್ಷಿಣ ಭಾಗ ವಿಶ್ವಚೇತನ ಯೋಗಶಾಲೆ ಪಶ್ಚಿಮ ಭಾಗ ವಿವೇಕಾನಂದ ಮೂಮೆಂಟ್ ಫಾರ್ ಮ್ಯಾನ್ ಮೇಕಿಂಗ್ ಪೂರ್ವ ಭಾಗ, ಎಸ್‍ವಿಆರ್ ಕೇರ್ ಟ್ರಸ್ಟ್ ಉತ್ತರ ಭಾಗ, ಸಮಿತ್ವಂ ಟ್ರಸ್ಟ್ ಸೆಂಟ್ರಲ್ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾರಪ್ಪ, ಯೋಗಿ ನಾರಾಯಣ, ರಾಜೇಂದ್ರ ಯೋಗಶ್ರೀ ಆರಾಧ್ಯ ಸೇರಿದಂತೆ ಮತ್ತಿತರರು ಇದ್ದರು.