ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಮೇರು ನಟಿಯ ಮಗನಿಗೆ ಜೀವನದಲ್ಲಿ ಕಷ್ಟ ಎದುರಾಗಿದ್ದು, ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಹಿರಿಯ ನಟಿ ಡಾ.ಲೀಲಾವತಿಯ ಪುತ್ರ ವಿನೋದ್ ರಾಜ್ ಅವರು ಚೆನ್ನೈನಲ್ಲಿರುವ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾರೆ. ಚಿತ್ರರಂಗದಿಂದ ದೂರ ಉಳಿದು ಕೃಷಿ ಚಟುವಟಿಕೆಯಲ್ಲಿ ವಿನೋದ್ ರಾಜ್ ತೊಡಗಿದ್ದರು. ಆದರೆ ಈಗ ಕೃಷಿಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತುಂಬಲಾಗದ ನಷ್ಟವಾಗಿದ್ದು, ಬೆಲೆ ಏರಿಕೆ ವ್ಯಾಪಾರ ವಹಿವಾಟಿನಲ್ಲಿ ಏರುಪೇರಾಗಿದೆ. ಆದ್ದರಿಂದ ಆಸ್ತಿ ಮಾರಾಟ ಮಾಡಲು ನಿರ್ಧಾರ ಮಾಡಿರುವುದಾಗಿ ವಿನೋದ್ ರಾಜ್ ಅವರು ಹೇಳುತ್ತಿದ್ದಾರೆ.
ವಿನೋದ್ ರಾಜ್ ಮಾತನಾಡಿ, ಕೂಲಿಯಾಳುಗಳಿಗೆ ಸಂಬಳ ನೀಡುವ ಹಣ ಇತ್ತೀಚೆಗೆ ಕಳುವಾಯಿತು. ತಾಲೂಕಿನಲ್ಲಿ ಪದೇಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿವೆ. ಕಳ್ಳಕಾಕರ ಬಗ್ಗೆ ಪೊಲೀಸರು ಸೂಕ್ತ ಕ್ರಮಗಳನ್ನ ಜರುಗಿಸಬೇಕು. ಕಳ್ಳತನ ನಡೆದಾಗ ನಮ್ಮ ತಾಯಿ ಆಘಾತಗೊಂಡಿದ್ದರು. ಬಳಿಕ ನನಗೆ ಏನು ತೊಂದರೆ ಆಗಿಲ್ಲ ಎಂದು ಹೇಳಿದಾಗ ಸಮಾಧಾನ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕಳ್ಳತನದ ಬಗ್ಗೆ ದೂರು ಕೊಟ್ಟಿದ್ದೇವೆ. ಶೀಘ್ರವಾಗಿ ಹಣವನ್ನು ಹುಡುಕಿಕೊಡುತ್ತೇವೆ ಎಂದು ಅವರು ಭರವಸೆ ಕೊಟ್ಟಿದ್ದಾರೆ. ಎಲ್ಲರೂ ಅವರವರ ಕರ್ತವ್ಯವನ್ನು ಸರಿಯಾಗಿ ಮಾಡಿ, ನಮಗಷ್ಟೇ ಅಲ್ಲ, ಹಣ ಕಳೆದುಕೊಂಡ ಪ್ರತಿಯೊಬ್ಬರಿಗೂ ಕಷ್ಟ ಇದೆ. ಬಡವರು ಸಂಪಾದನೆ ಮಾಡಿದ್ದ 1 ಸಾವಿರ ರೂ. ಕಳೆದುಕೊಂಡರೂ ಜೀವನ ನಡೆಸಲು ಕಷ್ಟವಾಗುತ್ತದೆ ಎಂದ್ರು.
ಇಂದಿನ ಪರಿಸ್ಥಿತಿಯಲ್ಲಿ ಒಂದು ಲಕ್ಷ ಹಣ ಹೊಂದಿಸುವುದು ಕಷ್ಟವಾಗಿದೆ. ಕೂಲಿಗರ ಸಂಬಳದ ಹಣ ಕಳವಾದ ಬಳಿಕ ಹಣ ಹೊಂದಿಸಲು ಸಾಕಷ್ಟು ಬಳಲಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಚೆನ್ನೈನಲ್ಲಿರುವ 5 ಎಕರೆ ತೋಟ ಮಾರಾಟ ಮಾಡಲು ಮುಂದಾಗಿದ್ದೇನೆ. ತಾಯಿ ಮಾಡಿಟ್ಟ ತೋಟವನ್ನು ಮಾರುತ್ತಿದ್ದೇನೆ. ಸುಮಾರು 25 ಜನರು ಕೂಲಿಯಾಳು ಇದ್ದಾರೆ. ಆದ್ದರಿಂದ ಅವರಿಗೆ ಆಸ್ತಿಯನ್ನು ಮಾರಿ ಸಂಬಳ ಕೊಡುಬೇಕಾಗಿದೆ. ಆಸ್ತಿ ಮಾರಾಟ ಮಾಡದೇ ಇದ್ದರೆ ಜೀವನ ಕಷ್ಟವಾಗುತ್ತಿದೆ ಎಂದು ಬೇಸರದಿಂದ ನಟ ವಿನೋದ್ ರಾಜ್ ಹೇಳಿಕೊಂಡಿದ್ದಾರೆ.