
ಬೆಂಗಳೂರು,ಅ.9-ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ದೋಸ್ತಿ ಪಕ್ಷಗಳಿಗೆ ಸರಿ ಸಮಾನವಾಗಿ ಮತ್ತೆ ಆಪರೇಷನ್ ಕಮಲದ ಮೊರೆ ಹೋಗಿದೆ.
ಮಾಜಿ ಸಚಿವ ಎನ್.ಚಲುವ ರಾಯಸ್ವಾಮಿ ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಗಳು ಮುಂದುವರೆದಿವೆ. ಒಂದು ವೇಳೆ ಇಬ್ಬರು ಪಕ್ಷಕ್ಕೆ ಬಂದರೆ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಆದರೆ ಈವರೆಗೂ ಉಭಯ ನಾಯಕರು ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತಳೆದಿಲ್ಲ. ಪಕ್ಷ ಸೇರ್ಪಡೆ ಬಗ್ಗೆಯೂ ತಮ್ಮ ಗುಟ್ಟು ಬಿಟ್ಟು ಕೊಡದ ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರುಗಳು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಚರ್ಚಿಸಿಯೇ ತಮ್ಮ ರಾಜಕೀಯ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮೂಲಕ ಬಿಜೆಪಿಗೆ ಕರೆತರುವಂತೆ ಖುದ್ದು ಬಿ.ಎಸ್.ಯಡಿಯೂರಪ್ಪನವರೇ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ನಿನ್ನೆ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಯಡಿಯೂರಪ್ಪನವರು ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದು, ಮಂಡ್ಯ ಮತ್ತು ರಾಮನಗರದಲ್ಲಿ ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳಿಲ್ಲ. ಇಬ್ಬರೂ ಬಂದರೆ ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇಬ್ಬರ ಜೊತೆಯೂ ಮಾತುಕತೆ ನಡೆಸಬೇಕೆಂದು ಸೂಚನೆ ಕೊಟ್ಟಿದ್ದಾರೆ.
ರಾಜಾಧ್ಯಕ್ಷರ ಸೂಚನೆಯಂತೆ ಯೋಗೇಶ್ವರ್ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದರಾದರೂ ಫಲಪ್ರದವಾಗಿಲ್ಲ. ಪ್ರಯತ್ನ ಮಾತ್ರ ಮುಂದುವರೆದಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಇಬ್ಬರು ಸಮಾನ ದುಃಖಿಗಳು:
ಹಾಗೆ ನೋಡಿದರೆ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಸದ್ಯ ಕಾಂಗ್ರೆಸ್‍ನಲ್ಲಿದ್ದರೂ ಇಲ್ಲದಂತಾಗಿದ್ದಾರೆ. ಒಂದು ಕಾಲದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಎಡಗೈ, ಬಲಗೈನಂತಿದ್ದ ಈ ಇಬ್ಬರು ಜೆಡಿಎಸ್‍ನಿಂದ ಹೊರಬಂದ ನಂತರ ರಾಜಕೀಯ ಭವಿಷ್ಯ ಕೂಡ ಡೋಲಾಯಮಾನವಾಗಿದೆ.
ಭಾರೀ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಸೇರಿದ್ದರಾದರೂ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಇಬ್ಬರಿಗೂ ಮರ್ಮಾಘಾತವಾಗಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡು ಸರ್ಕಾರ ರಚನೆಯಾದ ಬಳಿಕ ಇಬ್ಬರು ಇದ್ದರೂ ಇಲ್ಲದಂತಾಗಿದ್ದಾರೆ.
ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ಪ್ರಬಲ ರಾಜಕೀಯ ಎದುರಾಳಿ ಎಂದರೆ ಜೆಡಿಎಸ್. ಇಲ್ಲಿ ಬಿಜೆಪಿ ಸಂಘಟನೆ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲದ ಕಾರಣ ಕೈ ಜೊತೆಯೇ ಜಿದ್ದಾಜಿದ್ದಿ. ಸಚಿವ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಕಾಂಗ್ರೆಸ್ ಸೇರಿಕೊಂಡಿದ್ದ ಬಾಲಕೃಷ್ಣ ಮತ್ತು ಚಲುವರಾಯಸ್ವಾಮಿ ಈಗ ದಿಕ್ಕು ಕಾಣದ ನಾಯಕರಂತಾಗಿದ್ದಾರೆ.
ಏಕೆಂದರೆ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಪರಸ್ಪರ ತಮ್ಮ ಹಗೆತನವನ್ನು ಮರೆತು ಒಂದಾಗಿರುವುದು ಇಬ್ಬರಿಗೂ ನುಂಗಲಾರದ ತುತ್ತಾಗಿದೆ. ರಾಮನಗರ ಮತ್ತು ಮಂಡ್ಯದಲ್ಲಿ ದೋಸ್ತಿ ಮಾಡಿಕೊಂಡರೆ ನಾವು ಹೇಗೆ ಬೆಂಬಲ ನೀಡಬೇಕು ಎಂಬುದು ಇಬ್ಬರು ನಾಯಕರ ಪ್ರಶ್ನೆಯಾಗಿದೆ.
ಹೀಗಾಗಿಯೇ ಎರಡೂ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ದುಂಬಾಲು ಬಿದ್ದಿದ್ದಾರೆ. ಈಗಾಗಲೇ ಜೆಡಿಎಸ್‍ಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂಬ ತೀರ್ಮಾನವಾಗಿರುವುದರಿಂದ ಇಬ್ಬರು ಬೇಸರಗೊಂಡಿದ್ದಾರೆ.
ಈ ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಈ ಉಭಯ ನಾಯಕರಿಗೆ ಗಾಳ ಹಾಕುತ್ತಿದೆ.