ಪದವಿಗಳಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಭಾರತ್‍ಸ್ಕೌಟ್ಸ್ ಅಂಡ್ ಗೈಡ್ಸ್‍ನಂತಹ ಒಂದು ಕೋರ್ಸ್‍ಅನ್ನು ಕಡ್ಡಾಯಗೊಳಿಸಬೇಕು: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು, ಅ.9- ಯಾವುದೇ ಪದವಿಗಳಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಭಾರತ್‍ಸ್ಕೌಟ್ಸ್ ಅಂಡ್ ಗೈಡ್ಸ್‍ನಂತಹ ಯಾವುದಾದರು ಒಂದು ಕೋರ್ಸ್‍ಅನ್ನು ಕಡ್ಡಾಯಗೊಳಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ ನೀಡಿದರು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಬಿಬಿಎಂಪಿ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು ಆಯೋಜಿಸಿದ್ದ ವಿ.ಪಿ.ದೀನದಯಾಳ್ ನಾಯ್ಡು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಸಮುದಾಯದಲ್ಲಿ ಶಿಸ್ತು, ಮಾನವೀಯತೆ ರೂಢಿಸಲು ಇಂತಹ ಶಿಕ್ಷಣ ಅಗತ್ಯ ಎಂದರು.

ಶಾಲೆಗಳಲ್ಲಿ ವಿಜ್ಞಾನ ಇದೆ. ಆದರೆ, ಮೌಲ್ಯಗಳು ಕಡಿಮೆಯಾಗುತ್ತಿದೆ. ಯುವಕರಲ್ಲಿ ಮೌಲ್ಯಗಳನ್ನು ಉತ್ತೇಜಿಸುವ ಅಗತ್ಯವಿದೆ. ದೇಶದಲ್ಲಿ ಬಹುಭಾಷೆ, ಬಹು ಸಂಸ್ಕøತಿ ಇದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ. ಹೀಗಾಗಿ ಸಮಾಜ ಸೇವೆಗೆ ಯುವ ಸಮುದಾಯವನ್ನು ಪ್ರೇರೇಪಿಸಬೇಕಿದೆ ಎಂದು ತಿಳಿಸಿದರು.

ಕ್ಯಾಲಿಬರ್ಸ್ ಕ್ಯಾರೆಕ್ಟರ್ ಕೆಪಾಸಿಟಿ, ಕಾಂಡೆಕ್ಟ್ ಇರುವವರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಆದರೆ, ಕ್ಯಾಸ್ಟ್, ಕ್ಯಾಶ್, ಕ್ರಿಮಿನಲ್ ಹಿನ್ನೆಲೆಯುಳ್ಳವರೆ ಹೆಚ್ಚಾಗಿ ಸಾರ್ವಜನಿಕ ಜೀವನದಲ್ಲಿ ಮುಂದೆಬರುತ್ತಿದ್ದಾರೆ. ಇದು ದುರದೃಷ್ಟಕರ ಎಂದರು.

ಹೋರಾಟಗಾರರು, ನಾಯಕರು, ಗೌಡ, ನಾಯ್ಡು ಆಗಿ ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಸ್ಮರಿಸುತ್ತೇವೆ. ದೇಶಕ್ಕಾಗಿ ದುಡಿದವರು, ಮಡಿದವರು, ಸ್ವಾತಂತ್ರ್ಯ ಹೋರಾಟಗಾರರು, ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದ ದೀನ್‍ದಯಾಳರ ಸೇವೆಯನ್ನು ನಾವು ಸ್ಮರಿಸುತ್ತೇವೆ ಎಂದು ತಿಳಿಸಿದರು.

ಹವಾಮಾನ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ ವೆಂಕಯ್ಯನಾಯ್ಡು, ನದಿ, ಕೆರೆ, ರಸ್ತೆ ಒತ್ತುವರಿ ಮಾಡಲಾಗುತ್ತಿದೆ. ಇದರ ಪರಿಣಾಮ ಪ್ರಕೃತಿ ಮೇಲಾಗುತ್ತಿದೆ. ವಾತಾವರಣದಲ್ಲಿ ಏರುಪೇರಾಗುತ್ತಿದೆ. ಕೇರಳ, ಕೊಡಗಿನಲ್ಲಿ ಪ್ರವಾಹ ಉಂಟಾಯಿತು. ಇದಾದ ಒಂದೇ ತಿಂಗಳಲ್ಲಿ ಅಂತರ್ಜಲದಲ್ಲಿ ಕುಸಿತಕಂಡಿದೆ. ನಿಸರ್ಗ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಿ ವಹಿಸಬೇಕು ಎಂದರು.

ಬೆಂಗಳೂರಿನಲ್ಲಿ ವಾಯುಮಾಲಿನ್ಯ, ವಾಹನದಟ್ಟಣೆ ಸಾಮಾನ್ಯವಾಗಿ ಬಿಟ್ಟಿದೆ. ಪ್ರಧಾನಿ ಮೋದಿಯವರು ಘೋಷಿಸಿದಷ್ಟಕ್ಕೆ ಅಥವಾ ಮುಖ್ಯಮಂತ್ರಿ ಹೇಳಿದ ಮಾತ್ರಕ್ಕೆ ಬೆಂಗಳೂರು ಸ್ಮಾರ್ಟ್‍ಸಿಟಿ ಆಗುವುದಿಲ್ಲ. ಇದಕ್ಕೆ ಜನರ ಸಹಕಾರ ಬೇಕು ಎಂದ ಅವರು, ಸರ್ಕಾರದ ಸೌರಶಕ್ತಿ ವಿದ್ಯುತ್ ಯೋಜನೆ, ಮಳೆನೀರು ಕೊಯ್ಲು ಯೋಜನೆ ಉತ್ತಮ ಎಂದು ಪ್ರಶಂಸಿಸಿದರು.

ಸ್ಕೌಟ್ಸ್ ಅಂಡ್ ಗೈಡ್ಸ್ ಆಂದೋಲನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೀನದಯಾಳ್ ಅವರು ಆರಂಭಿಸಿದ ಇದನ್ನು ಪಿಜಿಆರ್ ಸಿಂಧ್ಯ ಮುಂದುವರಿಸುತ್ತಿದ್ದಾರೆ ಎಂದರು.
ಆರಂಭದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಉಪರಾಷ್ಟ್ರಪತಿಗಳು, ನಾಲ್ಕು ದಶಕಗಳಿಂದ ರಾಜ್ಯದ ಜನರ ಜತೆ ಬಾಂಧವ್ಯ ಹೊಂದಿದ್ದೇನೆ. ನಾಡಿನ ಜನರನ್ನು ಹೃದಯದಲ್ಲಿರಿಸಿದ್ದೇನೆ. ಉತ್ತಮ ಬಾಂಧವ್ಯ ಹೊಂದಿದ್ದೇನೆ. ಜನರಿಗೆ ನಾನು ಆಬಾರಿಯಾಗಿದ್ದೇನೆ ಎಂದು ತಿಳಿಸಿದರು.

ದಾರ್ಶನಿಕ, ನಿಜವಾದ ರಾಷ್ಟ್ರವಾದಿ ದೀನದಯಾಳ್ ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಕನ್ನಡದಲ್ಲೇ ನುಡಿದರು.

ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ಗಣ್ಯರು, ತ್ಯಾಗಿಗಳ ಜೀವನ ಸ್ಮರಣೆಯಿಂದ ಹಲವರ ಜೀವನ ಪರಿವರ್ತನೆಯಾಗಿದೆ. ಹಲವು ಮಂದಿ ಬದುಕುತ್ತಾರೆ, ಸಾಯುತ್ತಾರೆ. ಎಲ್ಲರನ್ನೂ ಸ್ಮರಿಸಲಾಗುವುದಿಲ್ಲ. ದೇಶಕ್ಕಾಗಿ ದುಡಿದವರು ಅಮರರಾಗುತ್ತಾರೆ. ಯುವ ಜನತೆಗೆ ಯಾವುದೇ ಕಾರ್ಯ ಅಸಾಧ್ಯವಲ್ಲ. ಬೆಟ್ಟವನ್ನು ಕುಟ್ಟಿ ಪುಡಿ ಪುಡಿ ಮಾಡಬಲ್ಲರು. ಎಲ್ಲವನ್ನು ಎದುರಿಸಿ ನಿಲ್ಲಬಲ್ಲರು. ಇಂತಹ ಯುವ ಶಕ್ತಿಯನ್ನು ರಾಷ್ಟ್ರಕ್ಕಾಗಿ ಬಳಕೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವುದೇ ಸಮುದಾಯದವರಾಗಲಿ ಮೊದಲು ತಾವು ಭಾರತೀಯರೆಂಬುದನ್ನು ಅರಿಯಬೇಕು. ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ದೀನದಯಾಳ್ ನಾಯ್ಡು ಅವರ ಸ್ಮರಣಾರ್ಥ ಎಲ್ಲರೂ ಸೇರಿದ್ದೇವೆ. ಇದು ಮನರಂಜನಾ ಕಾರ್ಯಕ್ರಮವಲ್ಲ. ಮಹಾನ್ ವ್ಯಕ್ತಿಯೊಬ್ಬರ ಜನ್ಮ ಶತಮಾನೋತ್ಸವ, ಕಬ್ಬಿಣ್ಣವನ್ನು ಸ್ಪರ್ಶಮಣಿ ಸ್ಪರ್ಶಿಸಿದರೆ ಬಂಗಾರವಾಗಲಿದೆ. ಹಾಗೆಯೇ ಗಣ್ಯರು, ತ್ಯಾಗಿಗಳ ಸ್ಮರಣೆಯಿಂದ ಹಲವರ ಜೀವನ ಪರಿವರ್ತನೆಯಾಗುತ್ತದೆ. ಎಲ್ಲರೂ ದೀನದಯಾಳರ ಜೀವನವನ್ನು ಅನುಸರಿಸಬೇಕೆಂದು ಕರೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅವರ ಪರವಾಗಿ ತಾವು ಬಂದಿರುವುದಾಗಿ ತಿಳಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಸಿಎಂ ಅವರ ಸಂದೇಶವನ್ನು ವಾಚಿಸಿದರು.

ಬೆಂಗಳೂರಿಗೆ ವಿಶ್ವದರ್ಜೆ ಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಮೆಟ್ರೋ ಎರಡನೇ ಹಂತ, ಪೆರಿಪೆರಲ್ ವರ್ತುಲ ರಸ್ತೆ ನಿರ್ಮಾಣ, ಉಪನಗರ ರೈಲು ಯೋಜನೆ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದು,50ಕೋಟಿ ವೆಚ್ಚದಲ್ಲಿ ಬೆಳ್ಳಂದೂರು ಕೆರೆಯನ್ನು ಪುನಶ್ಚೇತನ ಗೊಳಿಸಲಾಗುವುದು. ನಾಡಪ್ರಭು ಕೇಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ, ಬೆಂಗಳೂರನ್ನು ಫ್ಲೆಕ್ಸ್ ಮುಕ್ತಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಗುಣಾತ್ಮಕ ಶಿಕ್ಷಣಕ್ಕೆ ಗೈಡ್ಸ್ ಮತ್ತು ಸ್ಕೌಟ್ಸ್ ಸಹಕಾರಿ. ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿನ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ಎನ್.ಮಹೇಶ್, ಕೃಷ್ಣಬೈರೇಗೌಡ, ಸಂಸದ ಪಿ.ಸಿ.ಮೋಹನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಷ್ಟ್ರೀಯ ಆಯುಕ್ತ ಕೆ.ಕೆ.ಖಂಡೇಲ್‍ವಾಲ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ದೀನ್‍ದಯಾಳ್ ನಾಯ್ಡು ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಸಿ.ಆರ್.ಸಿಂಧ್ಯಾ, ಬಿಬಿಎಂಪಿ ವಿಶೇಷ ಆಯುಕ್ತರಾದ ಎಸ್.ಎ.ರವೀಂದ್ರ, ಮನೋಜ್‍ಕುಮಾರ್ ಮೀನ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ