ಜಮ್ಮು ಮತ್ತು ಕಾಶ್ಮೀರ: ನಾಳೆ ಎರಡನೇ ಹಂತದ ಚುನಾವಣೆ: ಬಿಗಿ ಬಂದೋಬಸ್ತ್

ಶ್ರೀನಗರ, ಅ.9-ಜಮ್ಮು ಮತ್ತು ಕಾಶ್ಮೀರದಲ್ಲಿ ನಾಳೆ ಎರಡನೇ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಅಭೂತಪೂರ್ವ ಭದ್ರತೆಯೊಂದಿಗೆ ಅ.8ರಂದು ಸೋಮವಾರ ನಗರ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆ ಮತದಾನ ನಡೆದಿತ್ತು. ಕೆಲವೆಡೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಚುನಾವಣೆ ಶಾಂತಿಯುತವಾಗಿತ್ತು.

ಮತದಾನದ ವೇಳೆ ಭಯೋತ್ಪಾದಕರು ದಾಳಿ ನಡೆಸುವ ಬೆದರಿಕೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೂ ಭಾರಿ ಬಂದೋಬಸ್ತ್ ಮಾಡಲಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ನ್ಯಾಷನಲ್ ಕಾನ್ಫೆರೆನ್ಸ್, ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ(ಪಿಡಿಪಿ) ಹಾಗೂ ಸಿಪಿಐ ಚುನಾವಣೆಯಲ್ಲಿ ಭಾಗಹಿಸಿಲ್ಲ. ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ಸೂಚಿಸುವವರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ನಿನ್ನೆ ನಡೆದ ಚುನಾವಣೆ ಸೇರಿ ನಾಲ್ಕು ಹಂತಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮತದನ ನಡೆಯಲಿದೆ. ನಾಳೆ ಎರಡನೇ ಹಂತದ ಮತದಾನವಾಗಲಿದೆ. ಅ.13 ಮತ್ತು ಅ.16ರಂದು ಮೂರು ಮತ್ತು ನಾಲ್ಕನೇ ಹಂತಗಳ ಚುನಾವಣೆ ನಡೆಯಲಿದೆ. ಅ.20ರಂದು ಎಲ್ಲ ಹಂತಗಳ ಚುನಾವಣೆಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಂತರ ನವೆಂಬರ್‍ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಂಚಾಯಿತಿ ಸಮಿತಿಗಳಿಗೆ ಚುನಾವಣೆಗಳು ನಡೆಯಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ