ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಮೋದಿ ಮುಂದಿನ ಚುನಾವಣೆಯನ್ನು ದಕ್ಷಿಣ ಭಾರತದ ಕರ್ನಾಟಕದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲೂ ಬಿಜೆಪಿಯ ಪತಾಕೆಯನ್ನು ಹಾರಿಸಲು ಮೋದಿ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಉತ್ತರ ಭಾರತದಲ್ಲಿ ಪ್ರಧಾನಿ ಮೋದಿಯವರ ಅಲೆ ಈಗಲೂ ಇದೆ. ಆದರೆ ದಕ್ಷಿಣ ಭಾರತಕ್ಕೆ ಕಾಲಿಟ್ಟರೆ ಮೋದಿಯವರ ಅಲೆ ಅಷ್ಟರ ಮಟ್ಟಿಗೆ ಇಲ್ಲ ಎಂದರೆ ತಪ್ಪಾಗಲಾರದು. ಜತೆಗೆ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕವನ್ನು ಹೊರತುಪಡಿಸಿ ಗಟ್ಟಿ ನೆಲೆಯಿಲ್ಲ. ಕರ್ನಾಟದಲ್ಲಿ ಇದೇ ವರ್ಷದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದರೂ ಅಧಿಕಾರ ಮಾತ್ರ ಬಿಜೆಪಿಗೆ ಸಿಗಲಿಲ್ಲ. ಈ ಕಾರಣಕ್ಕಾಗಿಯೇ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸೀಟ್ಗಳನ್ನು ಗೆಲ್ಲಲು ಮೋದಿ – ಅಮಿತ್ ಶಾ ಹೊಸ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.
ದಕ್ಷಿ ಭಾರತದ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಅಲೆ ಅಷ್ಟಕ್ಕಷ್ಟೇ. ಒಂದು ವೇಳೆ ಮೋದಿ ದಕ್ಷಿಣದಿಂದ ಸ್ಪರ್ದಿಸಿದರೆ ಇಲ್ಲೂ ಅಬ್ಬರವನ್ನು ಮಾಡುವ ಸಾಧ್ಯತೆಯಿದೆ. ಸಹಜವಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ದಕ್ಷಿಣದಿಂದ ಸ್ಪರ್ದಿಸಿದರೆ ರಾಜಕೀಯ ಚಿತ್ರಣ ಬದಲಾಗಬಹುದು ಎನ್ನುತ್ತಾರೆ ರಾಜಕೀಯ ಪಂಡಿತರು.
ಎಲ್ಲಿಂದ ಸ್ಪರ್ಧೆ?:
ಕರ್ನಾಟಕ ರಾಜ್ಯದಿಂದ ಲೋಕಸಭೆಗೆ ನಿಲ್ಲುವುದಾದರೆ ಮೋದಿ ಎಲ್ಲಿಂದ ಸ್ಪರ್ಧಿಸಬಹುದು. ಈ ಪ್ರಶ್ನೆಗೂ ಪಕ್ಷದ ಮೂಲಗಳಿಂದ ಉತ್ತರ ಲಭ್ಯವಾಗಿದೆ. ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉತ್ತರ ಕನ್ನಡ ಅಥವಾ ಬೆಂಗಳೂರು ದಕ್ಷಿಣದಿಂದ ಮೋದಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಮೂರೂ ಕ್ಷೇತ್ರಗಳೂ ಬಿಜೆಪಿಯ ಭದ್ರ ನೆಲೆಯಾಗಿದೆ. ಮೋದಿಯವರಿಗೆ ಪ್ರಬಲ ಪೈಪೋಟಿಯನ್ನು ಈ ಮೂರೂ ಕ್ಷೇತ್ರಗಳಲ್ಲಿ ನಿರೀಕ್ಷಿಸಲು ಸಾದ್ಯವಿಲ್ಲ ಎನ್ನಲಾಗುತ್ತಿದೆ. ಜತೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಂಸದ ಅನಂತ್ ಕುಮಾರ್ ಚುನಾವಣೆಗೆ ನಿಲ್ಲುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಡೋದರಾ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ನಂತರ ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿ ವಾರಣಾಸಿ ಕ್ಷೇತ್ರದ ಜತೆಗೆ ಕರ್ನಾಟಕದಲ್ಲೂ ನಿಲ್ಲಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕದಿಂದ ಗೆದ್ದ ರಾಷ್ಟ್ರೀಯ ನಾಯಕರು:
ಕರ್ನಾಟಕದಿಂದ ಉತ್ತರ ಭಾರತೀಯ ರಾಜಕೀಯ ನಾಯಕರು ಸ್ಪರ್ಧಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಕರ್ನಾಟಕದಿಂದ ಸ್ಪರ್ಧಿಸಿ ಗೆಲುವಿನ ರುಚಿ ಕಂಡಿದ್ದಾರೆ. ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ಮಾತ್ರ ಬಳ್ಳಾರಿಯಿಂದ ಚುನಾವಣೆ ಎದುರಿಸಿ ಸೋನಿಯಾ ಗಾಂಧಿಯವರ ವಿರುದ್ಧ ಸೋಲು ಕಂಡಿದ್ದರು.
ದೇಶದಲ್ಲಿ 1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದ ನಂತರ ರಾಜಕೀಯ ಚಿತ್ರಣವೇ ಬದಲಾಗಿತ್ತು. ಒಂದು ಕಾಲದಲ್ಲಿ ರಾಜಕೀಯ ಬದುಕಿನಲ್ಲಿ ಉತ್ತುಂಗದಲ್ಲಿದ್ದ ನಾಯಕಿ ಇಂದಿರಾ ಗಾಂಧಿಯನ್ನು ಸೋಲಿಸಲು ವೇದಿಕೆ ಸಿದ್ಧವಾಗಿತ್ತು. ಆಗ ಅವರು ಗೆಲುವಿಗಾಗಿ ಅರಸಿದ್ದು ಕರ್ನಾಟಕವನ್ನೇ. ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಇಂದಿರಾ ಗಾಂಧಿ ಗೆದ್ದಿದ್ದರು.