ಬೆಂಗಳೂರು, ಅ.8- ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‍ನ ಗ್ರಹಚಾರವೇ ನೆಟ್ಟ್ಟಗಿದ್ದಂತೆ ಇಲ್ಲ. ನಿನ್ನೆ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಪಕ್ಷದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು ವಿಧಾನ ಪರಿಷತ್ ಸದಸ್ಯ ರಘುಆಚಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲು ಆರ್ಥಿಕ ಅನುದಾನ ನೀಡದೇ ಇರುವುದರಿಂದ ಅಸಮಾಧಾನಗೊಂಡಿರುವ ರಘುಆಚಾರ್ ಕಾಂಗ್ರೆಸ್ ತೊರೆದು ವಿಧಾನಪರಿಷತ್ ಸದಸ್ಯತ್ವ ಹಾಗೂ ವಿಧಾನಪರಿಷತ್‍ನ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇಂದು ಅಥವಾ ನಾಳೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಘುಆಚಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿದ್ದರು. ಆಡಳಿತಾತ್ಮಕ ಅನುಮೋದನೆ ಸಿಕ್ಕ ನಂತರ ಆರ್ಥಿಕ ಇಲಾಖೆಯ ಅನುಮತಿ ನೀಡಬೇಕಿತ್ತು. ಆದರೆ, ಇಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಲು ಅನುದಾನ ನೀಡಲು ನಿರಾಕರಿಸುತ್ತಿದ್ದಾರೆ.
ಬದಲಾಗಿ ಕನಕಪುರ ತಾಲ್ಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಿದ್ದಾರೆ. ಚಿತ್ರದುರ್ಗದ ಜನ ಏನು ಅನ್ಯಾಯ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಈವರೆಗೂ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಒಂದು ಸಭೆಯನ್ನೂ ಮಾಡಿಲ್ಲ. ಮಂಜೂರಾಗಿದ್ದ ಯೋಜನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಆಗುತ್ತಿಲ್ಲ. ಜಿಲ್ಲೆಯ ಜನ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಈ ಹಿಂದೆ ಪಕ್ಷೇತರನ್ನಾಗಿ ಸ್ಪರ್ಧಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡಿ ವಿಧಾನಪರಿಷತ್‍ಗೆ ಆಯ್ಕೆಯಾಗಿ ಬಂದಿದ್ದೆ.
ಆನಂತರ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಪಕ್ಷದಿಂದ ಆಯ್ಕೆಯಾಗಿದ್ದೇನೆ. ಇಲ್ಲಿ ನಮ್ಮ ಕೆಲಸಗಳು ಆಗುವುದಿಲ್ಲ ಎಂದ ಮೇಲೆ ಪಕ್ಷದಲ್ಲಿದ್ದು ಏನು ಲಾಭ ? ಹೀಗಾಗಿ ನಾನು ಪಕ್ಷದಿಂದ ಹೊರ ಹೋಗಲು ಸಿದ್ದನಿದ್ದೇನೆ. ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರನಾಗಿ ಗೆದ್ದು ಬರುತ್ತೇನೆ. ಇನ್ನು ಮುಂದೆ ಯಾವ ಪಕ್ಷಕ್ಕೂ ಸೇರುವುದಿಲ್ಲ. ಈ ಪಕ್ಷಗಳ ಮುಲಾಜೆ ನನಗೆ ಸಾಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಅಸಮಾಧಾನವನ್ನು ಈಗಾಗಲೇ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ರಾಜೀನಾಮೆ ಕೊಡುವುದು ಬೇಡ. ಮಾತುಕತೆ ಮೂಲಕ ಬಗೆಹರಿಸೋಣ ಎಂದಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಬೇಕು ಅಥವಾ ಈಗಿರುವ 100 ಹಾಸಿಗೆ ಇರುವ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ನನ್ನ ಬೇಡಿಕೆ ಈಡೇರದೇ ಇದ್ದರೆ ರಾಜೀನಾಮೆ ನೀಡುವುದು ಶತಸಿದ್ದ. ಮೊದಲು ಸಿದ್ದರಾಮಯ್ಯ ಅವರ ಕೈಗೆ ರಾಜೀನಾಮೆ ಪತ್ರ ನೀಡುತ್ತೇನೆ. ಅವರು ಹೇಳಿದರೆ ರಾಜ್ಯಪಾಲರು ಇಲ್ಲವೇ ಸಭಾಪತಿಗಳಿಗಾಗಲಿ ಯಾರಿಗಾದರೂ ರಾಜೀನಾಮೆ ಪತ್ರಕೊಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.