ಬಸ್ ಪ್ರಯಾಣ ದರ ಏರಿಕೆ: ನಾಳೆ ಸಂಜೆ ನಿರ್ಧಾರ

ಬೆಂಗಳೂರು, ಅ.8- ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆಯಿಂದ ಉಂಟಾಗುತ್ತಿರುವ ನಷ್ಟದ ಹೊರೆಯನ್ನು ಕಡಿಮೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದ್ದು , ಬಸ್ ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ನಾಳೆ ಸಂಜೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಾಳೆ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೆಎಸ್‍ಆರ್‍ಟಿಸಿ , ಬಿಎಂಟಿಸಿ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವನೆಯ ಬಗ್ಗೆ ಚರ್ಚೆ ನಡೆಯಲಿದ್ದು , ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಸಾರಿಗೆ ಇಲಾಖೆ ಮೂರು ತಿಂಗಳ ಹಿಂದೆಯೇ ಶೇ.28ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರ ಇದುವರೆಗೂ ಪ್ರಯಾಣ ದರ ಏರಿಕೆಗೆ ಅವಕಾಶ ನೀಡಿಲ್ಲ. ಆದರೆ ಸೆ.18ರಂದು ಸರಾಸರಿ ಶೇ.18ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು.

ಸೆ.19ರ ಮಧ್ಯರಾತ್ರಿಯಿಂದಲೇ ಪರಿಷ್ಕøತ ಪ್ರಯಾಣ ದರ ಜಾರಿಗೆ ಬರಬೇಕಿತ್ತು. ಅಂದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಕಡಿಮೆ ಮಾಡುವ ಘೋಷಣೆ ಮಾಡಿದ್ದರು.

ಬಸ್ ಪ್ರಯಾಣ ದರ ಹೆಚ್ಚಳದಿಂದ ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ ಎಂಬುದನ್ನು ಮನಗಂಡ ಮುಖ್ಯಮಂತ್ರಿಯವರು ತಕ್ಷಣವೇ ಪರಿಷ್ಕøತ ಬಸ್ ಪ್ರಯಾಣ ದರಕ್ಕೆ ತಡೆ ನೀಡಿ ಹಳೆಯ ಪ್ರಯಾಣ ದರವನ್ನೇ ಮುಂದುವರೆಸುವಂತೆ ನಾಲ್ಕು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದರು.

ಮುಖ್ಯಮಂತ್ರಿಯವರ ಆದೇಶದ ಹಿನ್ನೆಲೆಯಲ್ಲಿ ಪರಿಷ್ಕರಿಸಲಾಗಿದ್ದ ಪ್ರಯಾಣ ದರವನ್ನು ತಡೆ ಹಿಡಿಯಲಾಗಿತ್ತು. ನಾಳೆ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಸ್ ಪ್ರಯಾಣ ದರ ಪರಿಷ್ಕರಣೆಗೆ ಅನುಮತಿ ನೀಡಿದರೆ ಅ.10 ರಿಂದ ಪರಿಷ್ಕøತ ಪ್ರಯಾಣ ದರ ಜಾರಿಗೆ ಬರುವ ಸಾಧ್ಯತೆಗಳಿವೆ.

ಈ ನಡುವೆ ಕೇಂದ್ರ ಸರ್ಕಾರ ಹಾಗೂ ತೈಲ ಕಂಪೆನಿಗಳು ತೈಲ ಬೆಲೆಯನ್ನು ಲೀಟರ್‍ಗೆ ಎರಡೂವರೆ ರೂಪಾಯಿ ಇಳಿಕೆ ಮಾಡಿವೆ. ಆದರೂ ನಿರಂತರವಾಗಿ ಏರುತ್ತಿರುವ ತೈಲ ಬೆಲೆಯಿಂದ ಸಾರಿಗೆ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ.

ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಪ್ರಯಾಣಿಕರಿಗೆ ವರ್ಗಾಯಿಸಲು ಮುಂದಾಗಿದ್ದು , ಮುಖ್ಯಮಂತ್ರಿಗಳ ಅನುಮತಿಯನ್ನಷ್ಟೇ ಕಾಯುತ್ತಿವೆ. ಸಾರಿಗೆ ಸಂಸ್ಥೆಗಳ ಉಳಿವಿಗಾಗಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ. ಅನ್ಯ ಮಾರ್ಗವಿಲ್ಲ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ