ಬೆಂಗಳೂರು: ಶಾಸಕ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ವಿರುದ್ಧವೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಈ ಟ್ವೀಟ್ ನ್ನು ಅವರು ಐಎನ್ಸಿ ಕರ್ನಾಟಕ, ದಿನೇಶ್ ಗುಂಡೂರಾವ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅವಮಾನ ಮಾಡುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಮೂಲಕ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಅಂತ ಸಂಪುಟ ವಿಸ್ತರಣೆ ಮುಂದೂಡಿಕೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಮೂಲಕ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸದ್ಯ ಬಿಜೆಪಿಯವರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು. ಸಚಿವನಾಗಲು ನನಗೆ ಎಲ್ಲ ಅರ್ಹತೆ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ನನಗೆ ಅತೃಪ್ತರು ಯಾರು ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ದರು.
ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಕುರಿತು ಮಾತನಾಡಿದ ಅವರು, ನಾನು ಮುಂಬೈಗೆ ಹೋಗಬೇಕು ಅಂದಿದ್ದರೆ ನಾನು ಹಿರೇಕೆರೂರಿಗೆ ಬರುತ್ತಿರಲಿಲ್ಲ. ನಾನು ಕೊಲ್ಲಾಪುರಕ್ಕೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದೆ. ಅತೃಪ್ತರು ಯಾರು ಹೋಗಿಲ್ಲ. ನಾನು ನಮ್ಮ ಸಹೋದರ ಹೋಗಿದ್ದೆವು ಎಂದು ತಿಳಿಸಿದ್ದರು.
ಕಾಂಗ್ರೆಸ್ ಶಾಸಕರೊಂದಿಗೆ ಪ್ರತಿದಿನ ಮಾತನಾಡುತ್ತಿರುತ್ತೇವೆ. ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಎಲ್ಲೂ ಬಿಡುಗಡೆ ಮಾಡಿಲ್ಲ. ಅಧಿಕೃತವಾಗಿಯೂ ಕೂಡ ಯಾರ ಹೆಸರನ್ನೂ ಹೇಳಿಲ್ಲ. ಸರ್ಕಾರ ಬೀಳುತ್ತೆ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಸರ್ಕಾರ ಬೀಳಲ್ಲ. ಇನ್ನು ಭದ್ರವಾಗಿದೆ. ನನ್ನ ಕ್ಷೇತ್ರದ ಜನರೇ ನನಗೆ ದೇವರು. ಅವರು ಹೇಳಿದ ರೀತಿ ನಾನು ಕೇಳುತ್ತೇವೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ ನನಗೆ ಸಚಿವ ಸ್ಥಾನವನ್ನು ಕೊಡುತ್ತಾರೆ ಎಂದು ಬಿ.ಸಿ. ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.