ಬೆಂಗಳೂರು, ಅ.7-ದೇಶದಲ್ಲೇ ಅತ್ಯುತ್ತಮ ಸೇವೆ ಒದಗಿಸುವ ಆಸ್ಪತ್ರೆ ಎಂದೇ ಗುರುತಿಸಿಕೊಂಡಿರುವ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎಲ್ಲ ರಜಾ ದಿನಗಳಲ್ಲೂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಸೇವೆಗಳು ಲಭ್ಯವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ತುರ್ತು ಓಟಿ (ಆಪರೇಷನ್ ಥಿಯೇಟರ್) ಸೇವೆ ವರ್ಷದ 365 ದಿನಗಳೂ ದೊರೆಯಲಿವೆ. ಸರ್ಕಾರಿ ಆದೇಶದಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದು, ಕೆಲವೇ ಕೆಲವು ಪೂರ್ವ ನಿಗದಿತ ರಜೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಜಾ ದಿನಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಓಟಿ (ಆಪರೇಷನ್ ಥಿಯೇಟರ್) ಸೇವೆಗಳು ಲಭಿಸಲಿವೆ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ನಿರ್ದೇಶಕ ಡಾ. ರಾಮಚಂದ್ರ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಭಾನುವಾರಗಳು ಹಾಗೂ ಆಯುಧ ಪೂಜೆ(ಅ.18), ನರಕ ಚತುದರ್ಶಿ(ನ.6) ಮತ್ತು ಬಲಿ ಪಾಡ್ಯಮಿ(ನ.8)-ಈ ಹೆಚ್ಚುವರಿ ಮೂರು ದಿನಗಳ ರಜೆಯಲ್ಲಿ ಇವು ನಿರ್ದೇಶಕರ ನಿರ್ದೇಶನದಂತೆ ಕಾರ್ಯನಿರ್ವಹಿಸಲ್ಪಡುತ್ತವೆ.
ಎಲ್ಲ ವಿಭಾಗಗಳ ಸರ್ಜನ್ಗಳು ಮತ್ತು ಹಿರಿಯ ವೈದ್ಯರುಗಳು ಶಸ್ತ್ರಚಿಕಿತ್ಸೆಗೆಳನ್ನು ನಡೆಸಲು ಸಹಕರಿಸುವಂತೆ ಅವರು ಕೋರಿದ್ದಾರೆ.
ಇ-ಹಾಸ್ಪಿಟಲ್ ಗೋ-ಲೈವ್ ಸೌಲಭ್ಯ : ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು ಅ.1ರಿಂದಲೇ ರೋಗಿಗಳು ಮತ್ತು ಸಿಬ್ಬಂದಿಯ ಅನುಕೂಲಕ್ಕಾಗಿ ಇ-ಹಾಸ್ಪಿಟಲ್ ಗೋ-ಲೈವ್ ಸೌಲಭ್ಯ ಆರಂಭಿಸಿದೆ. ಅತ್ಯಾಧುನಿಕ ಸಾಫ್ಟ್ವೇರ್ನಿಂದಾಗಿ ಇದು ಆಸ್ಪತ್ರೆಯ ಸಿಬ್ಬಂದಿಗೂ ನೆರವಾಗಲಿದೆ.
ಇದರಿಂದಾಗಿ ಹೊಸ ನೋಂದಣಿ, ಕ್ಯಾಸ್ ಬಿಲ್ಲಿಂಗ್, ಕ್ರೆಡಿಟ್ ಬಿಲ್ಲಿಂಗ್, ಆಸ್ಪತ್ರೆಗೆ ದಾಖಲೆ ಮತ್ತು ದಿಸಾರ್ಜ್ ಪ್ರಕ್ರಿಯೆ ಸುಗಮ ಮತ್ತು ಸರಳವಾಗಲಿದೆ ಎಂದು ಡಾ. ರಾಮಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಸ್ಥೆಯಲ್ಲಿ ಈಗ ಇ-ಆಸ್ಪತ್ರೆ, ಸಂದರ್ಶಕರ ನಿರ್ವಹಣೆ ವ್ಯವಸ್ಥೆ, ಇ-ಆಫೀಸ್ನಂಥ ಮತ್ತಿತರ ಸೌಲಭ್ಯಗಳು ಲಭ್ಯವಿದ್ದು, ಇದು ಸಾಕಾರಗೊಳ್ಳಲು ಕಾರಣರಾದ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.