ತಮಿಳುನಾಡಿಗೆ ಈಗಾಗಲೇ 226 ಟಿಎಂಸಿ ಹೆಚ್ಚು ಹರಿದ ಕಾವೇರಿ

ಬೆಂಗಳೂರು, ಅ.7-ತಮಿಳುನಾಡಿಗೆ ಕಾವೇರಿ ಜಲಾನಯನ ಭಾಗದಿಂದ ಈ ವರ್ಷ ಈಗಾಗಲೇ 226 ಟಿಎಂಸಿ ಅಡಿಗೂ ಹೆಚ್ಚು ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ.
ಕೊಡಗು ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾದ ಪರಿಣಾಮ ಭಾರೀ ಪ್ರಮಾಣದ ನೀರು ರಾಜ್ಯದಿಂದ ತಮಿಳುನಾಡಿಗೆ ಹರಿದುಹೋಗುವಂತಾಗಿದೆ.

ಜೂನ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ತಮಿಳುನಾಡಿಗೆ 123 ಟಿಎಂಸಿ ಅಡಿ ನೀರನ್ನು ಬಿಡಬೇಕಾಗಿತ್ತು. ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣದ ನೀರನ್ನು ರಾಜ್ಯದಿಂದ ಬಿಡಬೇಕಾಗಿತ್ತು. ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಭಾರೀ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡಲಾಗಿತ್ತು. ಇದರಿಂದ ಇದುವರೆಗೂ ತಮಿಳುನಾಡಿಗೆ 349 ಟಿಎಂಸಿ ಅಡಿ ನೀರು ಹರಿದು ಹೋಗಿದೆ.

ತಮಿಳುನಾಡಿಗೆ ವಾರ್ಷಿಕ 177.5 ಟಿಎಂಸಿ ಅಡಿ ನೀರನ್ನು ಕರ್ನಾಟಕ ಬಿಡಬೇಕಾಗಿತ್ತು. ಆ ಪ್ರಮಾಣದ ನೀರಿಗಿಂತಲೂ ಎರಡು ಪಟ್ಟು ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುವಂತಾಗಿದೆ.

ಹೆಚ್ಚುವರಿ ನೀರಿನ ಸಂಗ್ರಹಣೆ ಮಾಡಿಕೊಳ್ಳಲು ಪರ್ಯಾಯ ಜಲಾಶಯಗಳಿಲ್ಲ. ಕಾವೇರಿ ಕೊಳ್ಳದ ಕಬಿನಿ, ಹಾರಂಗಿ, ಹೇಮಾವತಿ ಹಾಗೂ ಕೆಆರ್‍ಎಸ್ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಹೆಚ್ಚು ಮಳೆಯಾದಾಗ ಹೆಚ್ಚುವರಿ ನೀರನ್ನು ಸಂಗ್ರಹಿಸಿಕೊಳ್ಳಲು ಪರ್ಯಾಯ ಜಲಾಶಯ ನಿರ್ಮಾಣ ಮಾಡುವ ಅಗತ್ಯವಿದೆ ಎಂಬುದನ್ನು ರಾಜ್ಯ ಸರ್ಕಾರ ಮನಗಂಡಿದ್ದು, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ.

ಈ ಬಾರಿ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿರುವುದರಿಂದ ಕಾವೇರಿ ಜಲಾನಯನ ಭಾಗದ ಕೆರೆ ಕಟ್ಟೆಗಳಿಗೂ ನೀರು ತುಂಬಿಸಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇನ್ನು ಅಕ್ಟೋಬರ್ ಅಂತ್ಯದವರೆಗೂ ಹಿಂಗಾರು ಮಳೆಯಾಗುವ ಸಾಧ್ಯತೆಗಳಿದ್ದು, ನೀರಿನ ಸದ್ಬಳಕೆ ಹಾಗೂ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ