ಬಿಬಿಎಂಪಿ ಉಪಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕರುಣಿಸುತ್ತಾರಾ ದೇವೇಗೌಡರು?

ಬೆಂಗಳೂರುಬಿಬಿಎಂಪಿ ಉಪ ಮಹಾಪೌರರಾಗಿದ್ದ ರಮಿಳಾ ಉಮಾಶಂಕರ್ ಅವರ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ತೆರವಾಗಿರುವ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಬಿಎಂಪಿ ಅಂಗಳದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿರುವುದರಿಂದ ಮೇಯರ್​ ಸ್ಥಾನವನ್ನು ಕಾಂಗ್ರೆಸ್​ಗೆ ಹಾಗೂ ಉಪಮೇಯರ್ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಅದರಂತೆ ವಾರದ ಹಿಂದೆ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್​ನ ಗಂಗಾಂಬಿಕೆ ಅವರು ಮೇಯರ್​ ಆಗಿ ಚುನಾಯಿತರಾದರೆ, ಜೆಡಿಎಸ್​ನ ರಮಿಳಾ ಉಮಾಶಂಕರ್ ಉಪಮೇಯರ್ ಆಗಿ ಆಯ್ಕೆಯಾದರು. ಆದರೆ, ಹೃದಯಾಘಾತದಿಂದಾಗಿ ರಮಿಳಾ ಅವರು ಅಸುನೀಗಿದರು. ಹೀಗಾಗಿ ಮತ್ತೆ ಜೆಡಿಎಸ್​ನಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಉಪಮೇಯರ್​ ಆಗಿ ಆಯ್ಕೆ ಮಾಡಬೇಕಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಪಕ್ಷದ ವರಿಷ್ಠ ಎಚ್​.ಡಿ.ದೇವೇಗೌಡರು ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಲು ಚಿಂತನೆ ನಡೆಸಿರುವ ದೇವೇಗೌಡರು, ಮುಸ್ಲಿಂ ಅಭ್ಯರ್ಥಿಯನ್ನೇ ಉಪ ಮೇಯರನ್ನಾಗಿ ಮಾಡುವ ಇಂಗಿತವನ್ಬು ಮುಸ್ಲಿಂ ಮುಖಂಡರೊಂದಿಗಿನ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಪ್ರತಿ ಚುನಾವಣೆಯಲ್ಲೂ ಮುಸ್ಲಿಂ ಬಾಂಧವರು ಜೆಡಿಎಸ್ ಜೊತೆಗಿದ್ದರು. ಈ ಬಾರಿ ಒಂದಷ್ಟು ವ್ಯತ್ಯಾಸಗಳಾಗಿದ್ದು ಸತ್ಯ. ಹಾಗಂಥ ಇವತ್ತಿಗೂ ಮಾನಸಿಕವಾಗಿ ಎಲ್ಲಾ ಮುಸ್ಲಿಮರು ಜೆಡಿಎಸ್ ಜೊತೆಗಿದ್ದಾರೆ. ಅವರ ನಂಬಿಕೆ ದೃಢವಾಗಬೇಕಾದರೆ ಮುಸ್ಲಿಂ ಕಾರ್ಪೊರೇಟರ್ ಗೆ ಉಪ ಮೇಯರ್ ಸ್ಥಾನ ಕೊಡಿ ಎಂದು ಸಭೆಯಲ್ಲಿ ಮುಸ್ಲಿಂ ಮುಖಂಡರು ಮಾಡಿದ ಮನವಿಗೆ ದೇವೇಗೌಡರು ಅಸ್ತು ಎಂದಿದ್ದಾರೆ.
ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಪರ  ಮುಸ್ಲಿಂ ನಾಯಕರು, ಧಾರ್ಮಿಕ ಮುಖಂಡರು ಪ್ರಬಲ‌ ಲಾಬಿ ನಡೆಸಿದ್ದಾರೆ. ಒಂದು ವೇಳೆ ಇಮ್ರಾನ್​ಗೆ ಅವಕಾಶ ನೀಡದಿದ್ದರೆ, ಜೆಡಿಎಸ್​ ಬೆಂಬಲಿಸದಿರಲು ಮುಸ್ಲಿಂ ಮುಖಂಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಗೌಡರಿಗೆ ಇಮ್ರಾನ್ ಆಯ್ಕೆ ವರವಾಗುವ ಸಾಧ್ಯತೆ ಇದೆ ಎನ್ನುವುದನ್ನು ಅರಿತು ಅವರನ್ನೇ ಉಪಮೇಯರ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ