ಲಖನೌ: ಮುಂದಿನ ಮೂರು ವರ್ಷಗಳಲ್ಲಿ ದೇಶ ಸಂಪೂರ್ಣ ನಕ್ಸಲ್ ಮುಕ್ತ ದೇಶವಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್ ಎಎಫ್)ನ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಮುಂದಿನ ಮೂರು ವರ್ಷಗಳಲ್ಲಿ ಎಡಪಂಥೀಯ ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟ ಹಾಕಲಾಗುವುದು ಎಂದರು.
ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ 10 ರಿಂದ 12ಕ್ಕೆ ಇಳಿದಿದೆ. ಈ ಹಿಂದೆ 126 ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು. ನಿಮ್ಮ ಹಾಗೂ ರಾಜ್ಯ ಪೊಲೀಸ್ ಪಡೆಗಳ ಕಠಿಣ ಶ್ರಮದಿಂದ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಭಾರತ ಸಂಪೂರ್ಣ ನಕ್ಸಲ್ ಮುಕ್ತವಾಗಲಿದೆ ಎಂದರು.
ಭದ್ರತಾ ಪಡೆಗಳು ಈ ವರ್ಷ 131 ನಕ್ಸಲರನ್ನು ಮತ್ತು ಉಗ್ರರನ್ನು ಹತ್ಯೆ ಮಾಡಿವೆ ಮತ್ತು ಇದೇ ವೇಳೆ 58 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ಎಡ ಪಂಥೀಯ ಹಿಂಸಾಚಾರವನ್ನು ಮಟ್ಟ ಹಾಕಲು ಕೇಂದ್ರ ಮೀಸಲು ಹಾಗೂ ರಾಜ್ಯ ಪೊಲೀಸ್ ಪಡೆಗಳು ಮಾಡುತ್ತಿರುವ ಅತ್ಯುತ್ತಮ ಕೆಲಸವನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.