ಗದಗ: ದುಷ್ಕರ್ಮಿಗಳ ಗುಂಪೊಂದು ವೈದ್ಯಕೀಯ ವಿದ್ಯಾರ್ಥಿಗಳ ಬಾಯ್ಸ್ ಹಾಸ್ಟೆಲ್ಗೆ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ನಗರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಗದಗ ಜಿಮ್ಸ್ ವೈದ್ಯಕೀಯ ಕಾಲೇಜಿನ ಬಾಯ್ಸ್ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್ ಮುಂದೆ ಕೆಲ ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಈ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರು, ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದಾರೆ. ಇದರಿಂದ ಎಂಬಿಬಿಎಸ್ ವಿದ್ಯಾರ್ಥಿಗಳು ದಿಕ್ಕಾಪಾಲಾಗಿದ್ದಾರೆ. ಆದ್ರೂ ಬಿಡಿದೆ ಬೆಲ್ಟ್, ಕಲ್ಲಿನಿಂದ ಹೊಡೆದಿದ್ದಾರೆ.
ಘಟನೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಲಾಟೆಯ ಸುದ್ದಿ ತಿಳಿದು ಗಾರ್ಡ್ಗಳು ಓಡಿ ಬರುವಷ್ಟರಲ್ಲಿ ಅವರು ಪರಾರಿಯಾಗಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ಗಾಯಾಳು ವಿದ್ಯಾರ್ಥಿಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಂಬಿಬಿಎಸ್ನ ಮೂರನೇ ವರ್ಷದ ವಿದ್ಯಾರ್ಥಿಗಳಾದ ಸ್ಕಂದ ಎನ್.ವಿ, ಉಲ್ಲಾಸ್ ಜಿ.ವಿ, ಅನೂಪ್ ಕೆ.ಎಂ ಹಾಗೂ ಮತ್ತೊಬ್ಬ ವಿದ್ಯಾರ್ಥಿಯ ಎದೆ, ಕಾಲು, ಬೆನ್ನಿಗೆ ಬಲವಾದ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗದಗ ತಾಲೂಕಿನ ನಾಗಾವಿ ತಾಂಡಾದ ಎಂಬಿಬಿಎಸ್ ವಿದ್ಯಾರ್ಥಿಯ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತಾಂಡಾದ ಮೆಡಿಕಲ್ ವಿದ್ಯಾರ್ಥಿಗೆ ಉಳಿದವರು ಸೈಕೊ ಎಂದು ರೇಗಿಸ್ತಾರೆ ಎಂಬ ಕಾರಣದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಇತರೆ ವಿದ್ಯಾರ್ಥಿಗಳು, ಗೂಂಡಾವರ್ತನೆ ತೋರಿರುವವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.