ಬೆಂಗಳೂರು: ನಟ ಶ್ರೀಮುರಳಿ ಸದ್ಯ “ಭರಾಟೆ” ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಮುಂದಿನ ಚಿತ್ರ “ಮದಗಜ” ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಮಾತ್ರ ತಾವು ಚಿತ್ರದ ಟೈಟಲ್ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
“ಮದಗಜ” ಚಿತ್ರದ ಶೀರ್ಷಿಕೆಯು ಕೃತಿಸ್ವಾಮ್ಯ ವಿಚಾರವಾಗಿ ಹೆಚ್ಚು ಗೊಂದಲಕ್ಕೆ ಒಳಗಾಗಿದೆ.”ಮದಗಜ” ಶೀರ್ಷಿಕೆಯ ಹಕ್ಕು ಸ್ವಾಮ್ಯ ನಿರ್ಮಾಪಕ ಜಿ.ರಾಮಮೂರ್ತಿ ಎನ್ನುವವರಿಗೆ ಸೇರಿದ್ದು ಇದೀಗ ನಿರ್ದೇಸಕ ಮಹೇಶ್ ತಾವು ಚಿತ್ರದ ಹೆಸರನ್ನು ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ “ಮದಗಜ” ಎನ್ನುವ ಪದ ಹಾಗೆಯೇ ಉಳಿಸಿಕೊಂಡು ಇದಕ್ಕೆ “ಶ್ರೀಮುರಳಿ ಮದಗಜ” ಅಥವಾ “ವೀರ ಮದಗಜ” ಎನ್ನುವ ಹೊಸ ನಾಮಕರಣ ಮಾಡಲು ಅವರು ನಿರ್ಧರಿಸಿದ್ದಾರೆ.
ಇದೇ ವೇಳೆ ರಾಮಮೂರ್ತಿ ತಾವು ದರ್ಶನ್ ತೂಗುದೀಪ್ ಅವರಿಗಾಗಿ ಈ ಶೀರ್ಷಿಕೆ ತೆಗೆದುಕೊಂಡಿದ್ದು ದರ್ಶನ್ ನಾಯಕನಾಗಲಿರುವ ಈ ಚಿತ್ರದ ಕೆಲಸಗಳು ಇದಾಗಲೇ ಪ್ರಾರಂಬವಾಗಿದೆ ಎಂದಿದ್ದಾರೆ. ಶ್ರೀಮುರಳಿ ನಾಯಕನಾಗಿ ಕಾಣಿಸಿಕೊಳ್ಳ್ಲುವ ಹೊಸ ಚಿತ್ರದ ಘೋಷಣೆಯಾದ ಬಳಿಕವಷ್ಟೇ ರಾಮಮೂರ್ತಿಗಳು ಈ ಪ್ರತಿಕ್ರಿಯೆ ನೀಡಿದರು ಎನ್ನುವುದು ಇಲ್ಲಿ ಗಮನಾರ್ಹ ಅಂಶ.
ಇನ್ನು ಮಹೇಶ್ ತಮ್ಮ ಚಿತ್ರಕ್ಕಾಗಿ ಕಥೆಯನ್ನು ಸಿದ್ದಮಾಡಿಟ್ಟುಕೊಂಡಿದ್ದು ಮುಂದಿನ ಜನವರಿಯಿಂದ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ. ಶ್ರೀಮುರಳಿಯ ಜನ್ಮದಿನವಾದ ಡಿಸೆಂಬರ್ 17ಕ್ಕೆ ನಾಯಕನ ಫಸ್ಟ್ ಲುಕ್ ಬಿಡುಗಡೆಗೆ ಸಹ ಅವರು ಯೋಜನೆ ಹಾಕಿಕೊಂಡಿದ್ದಾರೆ. ಅಂದೇ ಅವರು ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಘೋಷಿಸುತ್ತಾರೆ ಎಂದು ತಿಳಿದುಬಂದಿದೆ.