ಬೆಂಗಳೂರು, ಅ.6- ನಿನ್ನೆಯಷ್ಟೇ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದ ಎಸಿಬಿ ಅಧಿಕಾರಿಗಳು ಇಂದೂ ತಮ್ಮ ದಾಳಿಯನ್ನು ಮುಂದುವರಿಸಿದ್ದು, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಬೆಳಗಾವಿಯ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ಬಿ.ಪಾಟೀಲ್ ಹಾಗೂ ಬಾಗಲಕೋಟೆ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಚಿದಾನಂದ ಬಿ.ಮಿಂಚಿನಾಳ್ ಅವರಿಗೆ ಸೇರಿದ 6 ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬೆಳಗಾವಿಯ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ಬಿ.ಪಾಟೀಲ್ ಅವರ ಬೆಳಗಾವಿ ಹಾಗೂ ರಾಮತೀರ್ಥನಗರದ ವಾಸದ ಮನೆ, ಅವರ ಸಂಬಂಧಿಕರ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮನೆ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.
ಎಸಿಬಿ ಪೆÇಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ನೇತೃತ್ವದ ತಂಡ ಮುಂಜಾನೆ ಏಕಕಾಲದಲ್ಲಿ ರಾಮತೀರ್ಥ ನಗರದಲ್ಲಿರುವ ಪಾಟೀಲ್ ಅವರ ಮನೆ, ಬೈಲಹೊಂಗಲದಲ್ಲಿರುವ ಸಹೋದರಿಯ ಮನೆ ಸೇರಿ ಒಟ್ಟು ಮೂರು ಕಡೆ ದಾಳಿ ನಡೆಸಿದೆ.
ಇದುವರೆಗೆ ಆರು ಲಕ್ಷ ರೂ.ಗೂ ಹೆಚ್ಚು ನಗದು, 600 ಗ್ರಾಂ ಚಿನ್ನಾಭರಣ, 3 ಕೆಜಿಗೂ ಹೆಚ್ಚು ಬೆಳ್ಳಿ ಆಭರಣಗಳು ಮತ್ತು ಮಹತ್ವದ ದಾಖಲೆಗಳು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.
ಬೆಳಗಾವಿಯ ಹಿಂಡಲಗಾ ಜೈಲು ಬಳಿಯ ಆಸ್ತಿ ಪತ್ರ ಸೇರಿದಂತೆ ಯರಗಟ್ಟಿಯಲ್ಲಿ 13 ಗುಂಟೆ ಜಮೀನಿನಲ್ಲಿ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದ ಪತ್ರ ಸಿಕ್ಕಿದೆ. ಬೆಂಗಳೂರಿನಲ್ಲಿ ಮಗನ ಹೆಸರಿನಲ್ಲಿರುವ ಆಸ್ತಿ ಪತ್ರಗಳು ಕೂಡ ದೊರೆತಿವೆ.
ಎಸಿಎಫ್ ಚಂದ್ರೇಗೌಡ ಪಾಟೀಲ್ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಕಂತೆ ಕಂತೆ ನೋಟುಗಳು, ಬೆಳ್ಳಿ ವಸ್ತುಗಳು, ಚಿನ್ನದ ಸರ, ಚಿನ್ನದ ಉಂಗುರ ಪತ್ತೆಯಾಗಿವೆ. ಆಸ್ತಿ ದಾಖಲೆ ಪತ್ರ, ಬ್ಯಾಂಕ್ ಪಾಸ್ಬುಕ್, ಎಟಿಎಮ್ ಕಾರ್ಡ್, ಪಾನ್ಕಾರ್ಡ್ನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮಹತ್ವದ ದಾಖಲೆ, ಲ್ಯಾಪ್ಟಾಪ್ನ್ನು ಪರಿಶೀಲಿಸುತ್ತಿದ್ದಾರೆ.
ಬಾಗಲಕೋಟೆಯಲ್ಲಿಯೂ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಎಇಇ ಚಿದಾನಂದ ಬಿ.ಮಿಂಚಿನಾಳ್ ಅವರ ವಿಜಯಪುರ ನಗರದಲ್ಲಿನ ಎರಡು ಮನೆ, ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಕಾಲಕ ಅಭಿಯಂತರ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ಇಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಯಿಂದ ವಶಪಡಿಸಿಕೊಂಡ ಆಸ್ತಿ ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇವರಿಬ್ಬರಿಗೆ ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಡಿವೈಎಸ್ ಪಿ. ಮಲ್ಲಾಪೂರ, ಇನ್ಸಪೆಕ್ಟರ್ ಹಳ್ಳೂರ ಮತ್ತು ಮಠಪತಿ ನೇತೃತ್ವದ ತಂಡ ದಾಳಿ ನಡೆಸಿದೆ.