ಬೆಂಗಳೂರು,ಅ.5- ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಅಸಮಾಧಾನಗೊಂಡಿರುವ ಆಕಾಂಕ್ಷಿಗಳಿಗೆ ಸಮ್ಮಿಶ್ರ ಸರ್ಕಾರ 12 ಸಂಸದೀಯ ಕಾರ್ಯದರ್ಶಿ ಸ್ಥಾನಗಳನ್ನು ನೀಡುವ ಮೂಲಕ ಭಿನ್ನಮತ ಶಮನಗೊಳಿಸಲು ಮುಂದಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ 12 ಮಂದಿ ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ನೀಡಲಾಗಿತ್ತು. ಇವರೆಲ್ಲರಿಗೂ ರಾಜ್ಯ ಸಚಿವರಿಗಿರುವ ಸ್ಥಾನಮಾನವನ್ನು ನೀಡಲಾಗಿತ್ತು.
ಆದರೆ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನೇಮಕಗೊಳ್ಳಲಿರುವ ಹನ್ನೆರಡು ಮಂದಿ ಸಂಸದೀಯ ಕಾರ್ಯದರ್ಶಿಗಳಿಗೆ ಯಾವುದೇ ರೀತಿಯ ಸ್ಥಾನಮಾನ ಇರುವುದಿಲ್ಲ.
ಸಂಪುಟ, ರಾಜ್ಯ ಹಾಗೂ ಸ್ವತಂತ್ರ ದರ್ಜೆಯ ಸ್ಥಾನಮಾನವೂ ಇರುವುದಿಲ್ಲ. ಕೇವಲ ಸಂಸದೀಯ ಕಾರ್ಯದರ್ಶಿಗಳೆಂದಷ್ಟೇ ಕಾರ್ಯ ನಿರ್ವಹಿಸಲಿದ್ದಾರೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಒಂದೇ ಹುದ್ದೆ ಒಂದೇ ನಿಯಮ ಎಂಬಂತೆ ಶಾಸಕರಿಗೆ ಯಾವುದೇ ಸ್ಥಾನ ನೀಡಿದರೂ ಅದು ಕಾನೂನು ವ್ಯಾಪ್ತಿಯನ್ನು ಮೀರುವಂತಿಲ್ಲ. ದೆಹಲಿಯ ಆಮ್ ಆದ್ಮಿ ಸರ್ಕಾರ ಸುಮಾರು 20ಕ್ಕೂ ಹೆಚ್ಚು ಶಾಸಕರಿಗೆ ಇದೇ ರೀತಿ ಸ್ಥಾನಮಾನ ನೀಡಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರಿಂದ ಈಗ ಶಾಸಕ ಸ್ಥಾನವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ನ್ಯಾಯಾಲಯದ ಮಧ್ಯಪ್ರವೇಶದಿಂದ ಸದ್ಯಕ್ಕೆ ತೂಗುಗತ್ತಿಯಿಂದ ಪಾರಾಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿಗಳಿಗೆ ವಿಶೇಷ ಸ್ಥಾನಮಾನ ನೀಡದಿರಲು ತೀರ್ಮಾನಿಸಿದೆ.
ಯಾರಿಗೆ ಎಷ್ಟೆಷ್ಟು?
ಹನ್ನೆರಡು ಮಂದಿ ಸಂಸದೀಯ ಕಾರ್ಯದರ್ಶಿಗಳಲ್ಲಿ ಕಾಂಗ್ರೆಸ್‍ನಿಂದ 8 ಹಾಗೂ ಜೆಡಿಎಸ್‍ನಿಂದ ನಾಲ್ವರಿಗೆ ಸ್ಥಾನ ಸಿಗಲಿದೆ. ಸಚಿವ ಸ್ಥಾನ ಸಿಗದೆ ಸರ್ಕಾರದ ವಿರುದ್ದ ಬುಸುಗುಡುತ್ತಿರುವ ಕೆಲವರನ್ನು ಸಮಾಧಾನಪಡಿಸಲು ಉಭಯ ಪಕ್ಷಗಳ ಮುಖಂಡರು ಈ ತಂತ್ರವನ್ನು ಅನುಸರಿಸಿದ್ದಾರೆ.
ಸದ್ಯದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.