ನವದೆಹಲಿ: ಭಾರತ ಹಾಗೂ ರಷ್ಯಾ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿದ್ದು, 40 ಸಾವಿರ ಕೋಟಿ ವೆಚ್ಚದಲ್ಲಿ ‘ಎಸ್-400 ಟ್ರಯಂಫ್ ಕ್ಷಿಪಣಿ’ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಉಭಯ ದೇಶಗಳು ಪರಸ್ಪರ ಸಹಿಹಾಕಿವೆ.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ನಡೆದ ಭಾರತ-ರಷ್ಯಾ ನಡುವಣ 19ನೇ ದ್ವಿಪಕ್ಷೀಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಎಸ್-400 ಏರ್’ಡಿಫೆನ್ಸ್ ಸಿಸ್ಟಂ ಖರೀದಿ ಒಪ್ಪಂದಗಳಿಗೆ ಸಹಿಹಾಕಿದರು. ಈ ಮೂಲಕ ದೇಶದ ರಕ್ಷಾಣಾ ವಲಯಕ್ಕೆ ಇನ್ನಷ್ಟು ಶಕ್ತಿ ಹೆಚ್ಚಿದಂತಾಗಿದೆ.
ಈ ವೇಳೆ ರಷ್ಯಾದ ಸೈಬೀರಿಯಾ ಬಳಿಯಿರುವ ನೊವೊಸಿಬಿರ್ಸ್ಕ್ ನಲ್ಲಿ ಭಾರತೀಯ ಮೇಲ್ವಿಚಾರಣಾ ಕೇಂದ್ರವನ್ನು ನಿರ್ಮಿಸುವ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಖರೀಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿತ್ತು. ಅಮೆರಿಕಾದ ಈ ಎಚ್ಚರಿಕೆರ್ ನಡುವೆಯೂ ಭಾರತ ಒಪ್ಪಂದಕ್ಕೆ ಸಹಿಹಾಕಿರುವುದು ವಿಷೇಷ.
ಉಭಯ ದೇಶಗಳ ಮಾತುಕತೆ ವೇಳೆ ಐಎನ್ಎಸ್ ಚಕ್ರ ಜಲಾಂತರ್ಗಾಮಿ ನೌಕೆ ಜಾಗಕ್ಕೆ ಮರು ನಿರ್ಮಾಣಗೊಂಡಿರುವ, ಪರಮಾಣು ಇಂಧನ ಚಾಲಿತ ಅಕುಲಾ ದರ್ಜೆ ಸಬ್ ಮರೀನ್ ಖರೀದಿಗೆ ರೂ.14 ಸಾವಿರ ಕೋಟಿ ಒಪ್ಪಂದ, ಕ್ರಿವಾಕ್ ದರ್ಜೆಯ ಲಘು ನೌಕೆಗಳನ್ನು ರೂ.14 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿ, ದೇಶದ ಒಂದು ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಏಕೆ-103 ರೈಫಲ್ ಉತ್ಪಾದನೆಗೆ ಒಪ್ಪಂದವೇರ್ಪಡಲಿದೆ ಎಂದು ಹೇಳಲಾಗಿದೆ.
ಇದಲ್ಲದೆ 2022ಕ್ಕೆ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆ ರೂಪಿಸಿದ್ದು, ಇದಕ್ಕೆ ಪೂರಕವಾಗಿ ಭಾರತದ ಗಗನಯಾತ್ರಿಗಳನ್ನು ಕೆಲ ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ಕರೆದೊಯ್ಯುವ ಕುರಿತೂ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ ಎನ್ನಲಾಗಿದೆ.