ಬೆಂಗಳೂರು/ನವದೆಹಲಿ,ಅ.5- ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಭಾರೀ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಎದ್ದಿರುವುದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ಕರಾವಳಿ ತೀರಾ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರ , ಆಂಧ್ರಪ್ರದೇಶ, ಅಸ್ಸಾಂ, ಮೇಘಾಲಯ, ನಾಗಲಾಂಡ್, ತ್ರಿಪುರ ಸೇರಿದಂತೆ ಮತ್ತಿತರ ಕಡೆ ಇನ್ನು ಒಂದು ವಾರ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ತೀರಾ ಪ್ರದೇಶ, ಗೋವಾದ ಕೊಂಕಣ್, ಮಹಾರಾಷ್ಟ್ರದ ಮರಾಠವಾಡ, ಕೇರಳದ ತಿರವನಂತನಪುರ, ವಯನಾಡು, ಪುದುಚೇರಿ ಮತ್ತಿತರ ಕಡೆ ವಾಯುಭಾರ ಕುಸಿತದಿಂದ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ.
ನಿನ್ನೆಯಿಂದಲೇ ಅನೇಕ ಕಡೆ ತುಂತುರು ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿದೆ. ಇನ್ನು ಮಂಗಳೂರು, ಉಡುಪಿ, ಮಡಿಕೇರಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆ ಹೆಚ್ಚಿನ ಮಳೆಯಾಗಲಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, 140ರಿಂದ 180 ಮಿ.ಮೀ ಹಿಂಗಾರು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ರೆಡ್ ಅಲರ್ಟ್: ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಗೃಹ ಇಲಾಖೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ.
ವಿಶೇಷವಾಗಿ ಕರಾವಳಿ ತೀರಾ ಪ್ರದೇಶ ಹಾಗೂ ಮಲೆನಾಡು ಸೇರಿದಂತೆ ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ಮುಂದಿನ ಸೋಮವಾರದ ತನಕ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಎಚ್ಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಾವಿರಾರು ದೋಣಿಗಳು ಸಮುದ್ರದ ತೀರದಲ್ಲೇ ಲಂಗುರು ಹಾಕಿದೆ.
ಹವಾಮಾನ ಇಲಾಖೆ ಸೂಚಿಸುವವರೆಗೂ ಯಾರೊಬ್ಬರೂ ಸಮುದ್ರಕ್ಕೆ ಇಳಿಯಬಾರದು. ಒಂದು ವೇಳೆ ಯಾರಾದರೂ ಮೀನುಗಾರಿಕೆಗೆ ತೆರಳಿದರೆ ದೋಣಿಗಳನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮೀನುಗಾರರಿಗೆ ಸೂಚನೆ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನಾಳೆಯಿಂದ ಅ.8ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಸಮುದ್ರಕ್ಕೆ ತೆರಳಿರುವ ಮೀನುಗಾರರು ಅ.5ರೊಳಗೆ ದಡಕ್ಕೆ ಹಿಂತಿರುಗುವಂತೆ ಮೀನುಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಬಂದರಿನಲ್ಲಿ ಮೈಕ್ ಮೂಲಕ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪುತ್ರನ್ ಉಳ್ಳಾಲ್ ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಕೆಲ ಭಾಗದಲ್ಲಿ ತುಂತುರು ಮಳೆಯಾಗುತ್ತಿದೆ.ಕಳೆದ ಎರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಸಿಡಿಲು ಗುಡುಗು ಸಹಿತ ಮಳೆಯಾಗಿದೆ. ಪರಿಣಾಮ ಮತ್ತೆ ಕರಾವಳಿಯಲ್ಲಿ ಮಳೆ ಆರ್ಭಟ ಆರಂಭವಾಗುವ ಸೂಚನೆಯಿದೆ.
ಇಂದಿನಿಂದ 8 ರವರೆಗೆ ಸಮುದ್ರ ಪ್ರಕ್ಷುಬ್ದಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಈ ಕೂಡಲೇ ಕಿನಾರೆಗೆ ಬರುವಂತೆ ಸಂದೇಶ ರವಾನಿಸಲಾಗಿದೆ.
ಸಮುದ್ರಕ್ಕೆ ತೆರಳಿರುವ ಮೀನುಗಾರರು ತಟಕ್ಕೆ ಮರಳುವಂತೆ ರೇಡಿಯೋ ಸಂದೇಶ ಕೂಡ ರವಾನಿಸಲಾಗಿದೆ. ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರ್‍ನಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮೈಕ್ ಮೂಲಕ ಸೂಚನೆ ನೀಡಲಾಗಿದೆ.