ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ನ ಯಾವ ಶಾಸಕರು ಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂಬುದು ಬಹುತೇಕ ಇಂದು ನಿಶ್ಚಯವಾಗುವ ಸಾಧ್ಯತೆ ಇದೆ.
ಹಲವು ಕಾರಣಗಳಿಂದ ತಿಂಗಳುಗಳಿಂದ ಮುಂದೂಡುತ್ತ ಬಂದಿದ್ದ ಸಂಪುಟ ವಿಸ್ತರಣೆ ಬಹುತೇಕ ಇನ್ನೊಂದು ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಉದ್ದೇಶದಿಂದಲೇ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಇತರ ಕೆಲ ಆಪ್ತರೊಂದಿಗೆ ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ತಮ್ಮ ನಿವಾಸ ಕಾವೇರಿಯಲ್ಲಿ ಇಂದು ಆಪ್ತರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಲಿದ್ದು, ಹೈಕಮಾಂಡ್ ಭೇಟಿ ಮಾಡಿ ದಿನಾಂಕ ನಿಗದಿ ಮಾಡುವ ಬಗ್ಗೆ ಆಪ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲಿಗೆ ಬಿದ್ದಿದ್ದು, ಸಂಪುಟಕ್ಕೆ ಸೇರುವ ಶಾಸಕರ ಹೆಸರನ್ನು ಇಂದು ಫೈನಲ್ ಮಾಡುವ ಸಾಧ್ಯತೆ ಇದೆ. ಜಾತಿವಾರು, ವಿಭಾಗವಾರು, ಪ್ರಭಾವ, ಹಿರಿತನ, ಲೋಕಸಭೆ ಚುನಾವಣೆ ಹಿನ್ನೆಲೆ… ಇವುಗಳ ಮಾನದಂಡದ ಮೇಲೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್ ಪಾಲಿಗೆ ಉಳಿದಿರುವ ಆರು ಸಚಿವ ಸ್ಥಾನಗಳಿಗೆ 22ಕ್ಕೂ ಹೆಚ್ಚು ಶಾಸಕರು ಸಚಿವಾಕಾಂಕ್ಷಿಗಳಾಗಿದ್ದಾರೆ. ಇವರು ಹಲವು ಮಂದಿ ತೀವ್ರಮಟ್ಟದಲ್ಲಿ ಅಕಾಂಕ್ಷಿಗಳಾಗಿದ್ದು, ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದಲ್ಲಿ, ಪಕ್ಷಕ್ಕೆ ಗುಡ್ಬೈ ಹೇಳಿ, ಬಿಜೆಪಿ ಸೇರುವ ಸಾಧ್ಯತೆಯೂ ಇದೆ. ಹಾಗೇನಾದರೂ ಅವರು ಕಾಂಗ್ರೆಸ್ ತೊರೆದರೆ ಮೈತ್ರಿ ಸರ್ಕಾರಕ್ಕೆ ಸಂಚಕಾರ ತಪ್ಪಿದ್ದಲ್ಲ. ಹೀಗಾಗಿ ಅತೀ ಉಪಾಯದಿಂದ ಈ ಸಂಕಷ್ಟವನ್ನು ಪಾರು ಮಾಡಬೇಕಾದ ಸವಾಲು ಸಿದ್ದರಾಮಯ್ಯ ಅವರ ಮೇಲಿದೆ. ಹಾಲಿ ಪಕ್ಷೇತರ ಶಾಸಕನ್ನುಕೈ ಬಿಟ್ಟು, ಪಕ್ಷದ ಶಾಸಕರಿಗೆ ಸ್ಥಾನ ಕಲ್ಪಿಸುವ ಚಿಂತನೆ ಕೂಡ ಕೈ ಮುಖಂಡರಿಗೆ ಇದೆ. ಇನ್ನು ಸ್ಥಾನ ಸಿಗದ ಕೆಲ ಅತೃಪ್ತರಿಗೆ ಆಯಾಕಟ್ಟಿನ ನಿಗಮ, ಮಂಡಳಿಯಲ್ಲಿ ಅವಕಾಶ ಕೊಡುವ ಬಗ್ಗೆಯೂ ಇಂದು ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.