ಬೆಂಗಳೂರು: ಚುನಾವಣೆಗೆ ಮೊದಲು ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು “ಲೋಕಾಯುಕ್ತವನ್ನು ಬಲಗೊಳಿಸುತ್ತೇವೆ” ಎನ್ನುವ ಮಾತು ಆಡುತ್ತಾರೆ. ಆದರೆ ಮತದಾನ ಮುಗಿಯುತ್ತಿದ್ದ ಹಾಗೆಯೇ ಆಡಳಿತ ಪಕ್ಷದವರು ಮಾತ್ರವಲ್ಲದೆ, ವಿರೋಧ ಪಕ್ಷದವರೂ ಆ ವಿಚಾರವನ್ನು ಮರೆತುಬಿಡುತ್ತಾರೆ. ಕಳೆದ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು, ಕುಮಾರಸ್ವಾಮಿಯವರ ನೇತೃತ್ವದ ಹೊಸ ರಾಜ್ಯ ಸರ್ಕಾರ ಬಂದು ಈಗ ನೂರು ದಿನಗಳ ಮೇಲಾಗಿದೆ. ಆದರೆ ಈ ನೂರು ದಿನಗಳಲ್ಲಿ ಲೋಕಾಯುಕ್ತದ ಸ್ಥಿತಿ-ಗತಿಯ ಕುರಿತು ಕುಮಾರಸ್ವಾಮಿಯವರಾಗಲಿ, ವಿರೋಧ ಪಕ್ಷದ ನಾಯಕರಾಗಲಿ ಮಾತನಾಡಿರುವುದು ಸಾರ್ವಜನಿಕರಿಗೆ ತಿಳಿದಿಲ್ಲ. ಆಡಳಿತದಲ್ಲಿ ಲಂಚ ಮತ್ತು ಕರ್ತವ್ಯಲೋಪ ಹಿಂದಿಗಿಂತ ಹೆಚ್ಚು ಈಗ ನಡೆಯುತ್ತಿದೆ ಮತ್ತು ಭ್ರಷ್ಟರಿಗೆ ಯಾವುದೇ ಸಂಸ್ಥೆಯ ಅಥವ ಕಾನೂನುಕ್ರಮದ ಭಯ ಇಲ್ಲ ಎನ್ನುವ ವಾತಾವರಣ ಮೂಡಿದೆ.
ಈ ಹಿನ್ನೆಲೆಯಲ್ಲಿ, ಸರಿಯಾಗಿ ಒಂದು ತಿಂಗಳ ಹಿಂದೆ (06-10-2018 ರಂದು) ನಮ್ಮ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ವತಿಯಿಂದ ಕೆ.ಆರ್.ಪೇಟೆ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ಇದೇ ವಿಚಾರವಾಗಿ “ಲೋಕಾಯುಕ್ತ ಬಲಪಡಿಸಿ – ಒಂದು ಆಗ್ರಹ ಕಾರ್ಯಕ್ರಮ” ವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಅಲ್ಲಿ ಸೇರಿದ್ದ ಕೆ.ಆರ್.ಪೇಟೆ ಕೃಷ್ಣ, ನ್ಯಾ.ಸಂತೋಷ್ ಹೆಗಡೆ, ಹೆಚ್.ಎಸ್.ದೊರೆಸ್ವಾಮಿ, ಎಸ್.ಆರ್.ಹಿರೇಮಠ್. ಫ್ರೊ.ಬಿ.ಕೆ.ಚಂದ್ರಶೇಖರ್, ರಮೇಶ್ ಬಾಬು, ಶ್ರೀಕುಮಾರ್, ಕೆ.ವಿ.ಧನಂಜಯ್, ಕಾತ್ಯಾಯಿನಿ ಚಾಮರಾಜ್, ರವಿ ಕೃಷ್ಣಾರೆಡ್ಡಿ, ಸೇರಿದಂತೆ ಎಲ್ಲಾ ಗಣ್ಯರ ಮತ್ತು ಭಾಗವಹಿಸಿದ್ದ ಹೋರಾಟಗರರ ಸಹಿಯುಳ್ಳ “ಆಗ್ರಹ ಪತ್ರ”ವನ್ನು ನಮ್ಮ ವೇದಿಕೆಯ ನಿಯೋಗ ಅಂದೇ ಖುದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಿತ್ತು.
ಆದರೆ ಸರ್ಕಾರ ಇಲ್ಲಿಯವರೆಗೆ ಈ ಆಗ್ರಹಕ್ಕೆ ಸ್ಪಂದಿಸಿಲ್ಲ ಮತ್ತು ತಮ್ಮ ವಚನದ್ರೋಹವನ್ನು ಮುಂದುವರೆಸಿದೆ. ಈಗ ಈ ಹೋರಾಟದ ಮುಂದುವರೆದ ಭಾಗವಾಗಿ ನಾಳೆ,
ಶನಿವಾರ, 06-10-2018, ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರ ತನಕ, ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ,
“ಲೋಕಾಯುಕ್ತ ಬಲಪಡಿಸಿ – ಧರಣಿ ಸತ್ಯಾಗ್ರಹ”ವನ್ನು ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಕೆ.ಆರ್.ಪೇಟೆ ಕೃಷ್ಣ, ಎಸ್.ಆರ್.ಹಿರೇಮಠ, ಕೆ.ವಿ.ಧನಂಜಯ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಸೇರಿದಂತೆ ಹಲವು ಗಣ್ಯರು ಮತ್ತು ಹೋರಾಟಗಾರರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಲೋಕಾಯುಕ್ತವನ್ನು ಬಲಪಡಿಸಬೇಕು, ಮತ್ತು ಆ ಮೂಲಕ ರಾಜ್ಯ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಬೇಕು, ಸಮಾಜದ ಎಲ್ಲಾ ವರ್ಗಗಳ ಜನರಿಗೆ ಸರ್ಕಾರಿ ನೌಕರರ ಕೆಲಸದಿಂದ ನ್ಯಾಯ ಸಿಗಬೇಕು ಎಂದು ಬಯಸುವ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನವಿದೆ.