
ನವದೆಹಲಿ, ಅ.4- ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ರೋಹಿಂಗ್ಯ ವಲಸಿಗರನ್ನು ಅವರ ಮೂಲ ದೇಶ ಮ್ಯಾನ್ಮಾರ್‍ಗೆ ಹಸ್ತಾಂತರಿಸಲು ಸುಪ್ರೀಂಕೋರ್ಟ್ ಇಂದು ಅವಕಾಶ ನೀಡಿದೆ.
ಏಳು ರೋಹಿಂಗ್ಯ ನಿರಾಶ್ರಿತರು ಅಕ್ರಮ ವಲಸಿಗರು ಎಂಬುದು ಸಕ್ಷಮ ನ್ಯಾಯಾಲಯಕ್ಕೆ ತಿಳಿದುಬಂದಿದೆ. ಹೀಗಾಗಿ ಅವರನ್ನು ಮ್ಯಾನ್ಮಾರ್‍ಗೆ ಹಸ್ತಾಂತರಿಸಲು ಅವಕಾಶ ನೀಡಲಾಗಿದೆ. ಇವರನ್ನು ಮ್ಯಾನ್ಮಾರ್ ತನ್ನ ನಾಗರಿಕರು ಎಂದು ಸ್ವೀಕರಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೈಗೊಳ್ಳಲಾದ ನಿರ್ಧಾರ ಕುರಿತು ಹಸ್ತಕ್ಷೇಪ ಮಾಡಲು ನಾವು ಬಯಸುವುದಿಲ್ಲ ಎಂದು ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ಪೀಠವು ತಿಳಿಸಿದೆ.
ಅಸ್ಸಾಂನ ಸಿಲ್‍ಚರ್‍ನ ಬಂದೀಖಾನೆಯಲ್ಲಿ ಇರಿಸಲಾಗಿರುವ ಏಳು ರೋಹಿಂಗ್ಯ ನಿರಾಶ್ರಿತರನ್ನು ಹಸ್ತಾಂತರ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಏಳು ಅಕ್ರಮ ವಲಸಿಗರನ್ನು ಮ್ಯಾನ್ಮಾರ್‍ಗೆ ಹಸ್ತಾಂತರ ಮಾಡಲು ಅವಕಾಶ ನೀಡಿರುವುದಾಗಿ ಪೀಠವು ತಿಳಿಸಿತು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿ ರಂಜನ್ ಗೊಗೈ ಅವರ ಪ್ರಥಮ ತೀರ್ಪು ಇದಾಗಿದೆ. ಈಶಾನ್ಯ ಭಾರತದ ಮೊದಲ ಚೀಫ್ ಜಸ್ಟೀಸ್ ಆದ ನಂತರ ಅವರು ವಿಚಾರಣೆ ಕೈಗೆತ್ತಿಕೊಂಡು ತೀರ್ಪು ನೀಡಿದ ಪ್ರಥಮ ಪ್ರಕರಣವೂ ಸಹ ಈಶಾನ್ಯ ಪ್ರಾಂತ್ಯದ್ದು ಎಂಬುದು ಕಾಕತಾಳೀಯವಾಗಿದೆ.