ವಾಷಿಂಗ್ಟನ್, ಅ.4- ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಮತ್ತೊಮ್ಮೆ ತಾಕೀತು ಮಾಡಿರುವ ಅಮೆರಿಕ, ಈ ವಿಷಯದಲ್ಲಿ ಮುಂದುವರಿದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎಂದು ಪುನರಾವರ್ತಿತ ಎಚ್ಚರಿಕೆ ನೀಡಿದೆ.
ವಾರ್ಷಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದಿನಿಂದ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಉಭಯ ದೇಶಗಳ ನಡುವೆ ರಕ್ಷಣೆ, ಬಾಹ್ಯಾಕಾಶ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಹಕಾರ ಒಪ್ಪಂದಕ್ಕೆ ವೇದಿಕೆ ಸಜ್ಜಾಗಿರುವುದಕ್ಕೆ ಮುನ್ನವೇ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳಿಗೆ ಅದರಲ್ಲೂ ನಿರ್ದಿಷ್ಟವಾಗಿ ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದೆ.
ರಷ್ಯಾ ಜೊತೆ ರಕ್ಷಣಾ ವ್ಯವಹಾರ ನಡೆಸುವ ದೇಶಗಳ ವಿರುದ್ಧ ನಿರ್ಬಂಧ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್‍ನಲ್ಲಿ ಸೂಚನೆ ನೀಡಿದ್ದರು. ರಷ್ಯಾ ಜೊತೆ ಭಾರತದ ಸಖ್ಯ ವೃದ್ದಿಯಾಗುತ್ತಿರುವುದು ಟ್ರಂಪ್ ಕೆಂಗಣ್ಣಿಗೆ ಕಾರಣವಾಗಿದೆ.
ರಷ್ಯಾ ಜೊತೆ ವಿಶೇಷವಾಗಿ ಟ್ರಯಂಫ್ ಕ್ಷಿಪಣಿ ಹೊಂದುವ ಭಾರತದ ನಿಲುವನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿರುವ ಅಮೆರಿಕ ನವದೆಹಲಿಗೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿ ಕೆಲವು ಸೌಲಭ್ಯಗಳಿಗೆ ಕತ್ತರಿ ಹಾಕುವ ಸಾಧ್ಯತೆಯೂ ಇದೆ.