ನವದೆಹಲಿ, ಅ.4- ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ ಕಂಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಟೀಕಿಸಿದ್ದಾರೆ.
ನಿನ್ನೆ ರೂಪಾಯಿ ಮೌಲ್ಯ 73.74ರೂ.ಗಳಿಗೆ ಕುಸಿದಿತ್ತು. ಇಂದು ಅದು 73.77ಕ್ಕೆ ಸರ್ವಕಾಲಿಕ ಕುಸಿತ ಕಂಡಿದೆ. ಇದರಿಂದ ರೂಪಾಯಿ ಬಿರುಕು ಬಿಡುತ್ತಿಲ್ಲ ಬದಲಿಗೆ ಮುರಿದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ರಾಹುಲ್ ಟೀಕಿಸಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ದೇಶದ ಜನರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಿಂದ ಕುದಿಯುವಂತಾಗಿದೆ. ಜತೆಗೆ ಈಗ ರೂಪಾಯಿ ಮೌಲ್ಯ ಕುಸಿದಿದೆ. ಆದಾಗ್ಯೂ ಪ್ರಧಾನಿಯವರು ಈ ಬಗ್ಗೆ ಈವರೆಗೆ ಏನೂ ಮಾತನಾಡಿಲ್ಲ. ಅವರು ಯಾವಾಗ ಮೌನ ಮುರಿಯುತ್ತಾರೆ ಎಂದು ಪ್ರಶ್ನಿಸಿದರು.