ಮಾಸ್ಕೋ/ನವದೆಹಲಿ, ಅ.4 (ಪಿಟಿಐ)- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಉಭಯ ದೇಶಗಳ ನಡುವೆ ರಕ್ಷಣೆ, ಬಾಹ್ಯಾಕಾಶ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಹಕಾರ ಒಪ್ಪಂದಕ್ಕೆ ವೇದಿಕೆ ಸಜ್ಜಾಗಿದೆ. ಈ ಎರಡು ರಾಷ್ಟ್ರಗಳ ನಡುವಣ ಸಂಬಂಧ ಬಲವರ್ಧನೆಯಾಗುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭಾರತಕ್ಕೆ ರಷ್ಯಾ ಐದು ಶತಕೋಟಿ ಡಾಲರ್ (36,668 ಕೋಟಿ ರೂ.ಗಳ) ವೆಚ್ಚದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಪೂರೈಸಲಿದ್ದು, ಈ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದವಾಗಲಿದೆ. ಜೊತೆಗೆ ಬಾಹ್ಯಾಕಾಶ ತಂತ್ರಜ್ಞಾನ, ಇಂಧನ ಮೊದಲಾದ ಕ್ಷೇತ್ರಗಳಲ್ಲೂ ಪರಸ್ಪರ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ.
ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಅಮೆರಿಕ ನೀಡಿರುವ ಗಂಭೀರ ಎಚ್ಚರಿಕೆ ನಡುವೆಯೂ ಈ ಒಡಂಬಡಿಕೆಗೆ ಚಾಲನೆ ಲಭಿಸಿದೆ. ಇದರೊಂದಿಗೆ ರಷ್ಯಾದಿಂದ ಅತ್ಯಂತ ಪ್ರಬಲ ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದ ಕುರಿತು ತಲೆದೋರಿದ್ದ ಗೊಂದಲ ಬಗೆಹರಿದಂತಾಗಿದೆ.
ಟ್ರಯಂಪ್ ದೀರ್ಘ ಅಂತರದಲ್ಲಿರುವ ವೈರಿಗಳ ವಿಮಾನಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಅಗಾಧ ಸಾಮಥ್ರ್ಯದ ಭೂಮಿಯಿಂದ ಗಗನಕ್ಕೆ ಚಿಮ್ಮುವ ಪ್ರಬಲ ಕ್ಷಿಪಣಿಯಾಗಿದೆ.
ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲವ್ರೋವ್ ಹಾಗೂ ಉನ್ನತ ಮಟ್ಟದ ನಿಯೋಗ ಸಹ ಪುಟಿನ್ ಜೊತೆ ಭಾರತ ಪ್ರವಾಸ ಕೈಗೊಳ್ಳಲಿದೆ. ನಾಳೆ ಪುಟಿನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಕುರಿತು ಔಪಚಾರಿಕ ಚರ್ಚೆ ನಡೆಸಲಿದ್ದಾರೆ. ಉಭಯ ದೇಶಗಳ ವಾರ್ಷಿಕ ಶೃಂಗಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.