ನವದೆಹಲಿ, ಅ.4- ರೂಪಾಯಿ ಮೌಲ್ಯ ಕುಸಿತ ಹಾಗೂ ವಾಣಿಜ್ಯ ವ್ಯಾಪಾರ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ಪ್ರಭು ನೇತೃತ್ವದಲ್ಲಿ ಇಂದು ಅಂತರ್ ಸಚಿವಾಲಯದ ಮಹತ್ವದ ಸಭೆ ನಡೆಯಿತು.
ಇಂದು ಕೂಡ ಡಾಲರ್ ಎದುರು ರೂಪಾಯಿ ಮೌಲ್ಯವು 73.77ರೂ.ಗಳಿಗೆ ಕುಸಿದಿದ್ದು ಸರ್ವಕಾಲಿಕ ದಾಖಲೆ ಎನಿಸಿದೆ. ನಿನ್ನೆಯೂ ಸಹ 73.74ರೂ.ಗಳಿಗೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಗಹನ ಚರ್ಚೆ ನಡೆದಿದೆ.
ಸರಕುಗಳಲ್ಲಿನ ವ್ಯಾಪಾರ ಕೊರತೆ ಅಂತರ ಹೆಚ್ಚಾಗುತ್ತಿದ್ದು, ರೂಪಾಯಿ ಕುಸಿತ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಂದಿನ ಅಂತರ್ ಸಚಿವಾಲಯದ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.
ಸುರೇಶ್ಪ್ರಭು ಅಧ್ಯಕ್ಷತೆ ವಹಿಸುವ ಈ ಸಭೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ, ಕಲ್ಲಿದ್ದಲು ಸಚಿವಾಲಯ, ಉಕ್ಕು ಸಚಿವಾಲಯ, ತೈಲ ಸಚಿವಾಲಯ, ಔಷಧ ಕ್ಷೇತ್ರಗಳ ಇಲಾಖೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
ರೂಪಾಯಿ ಕುಸಿತ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಜುಲೈನಲ್ಲಿ ಭಾರತದ ವ್ಯಾಪಾರ ಕೊರತೆಯು 18.02 ಶತಕೋಟಿ ಡಾಲರ್ಗಳಷ್ಟಿತ್ತು. ಇದು ಐದು ವರ್ಷಗಳಲ್ಲಿ ಅತ್ಯಧಿಕ ಕೊರತೆಯಾಗಿದೆ. ಆಗಸ್ಟ್ನಲ್ಲೂ ಇದು 17.4 ಶತಕೋಟಿ ಡಾಲರ್ಗೆ ಇಳಿದಿತ್ತು.