ತಿರುವನಂತಪುರಂ, ಅ.4- ಇತ್ತೀಚೆಗಷ್ಟೇ ಶತಮಾನದ ಮಹಾ ಮಳೆಗೆ ತತ್ತರಿಸಿ ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಕರಾವಳಿ ರಾಜ್ಯ ಕೇರಳದಲ್ಲಿ ಇಂದು ಬೆಳಗ್ಗೆಯಿಂದ ಮಳೆ ಆರಂಭವಾಗಿದ್ದು, ಜನರು ಭಯಭೀತರಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ನಿನ್ನೆಯಿಂದಲೇ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ದ್ವೀಪರಾಷ್ಟ್ರ ಶ್ರೀಲಂಕಾ ಸಮೀಪ ವಾಯುಭಾರ ಕುಸಿತದಿಂದ ದೈತ್ಯಾಕಾರದ ಚಂಡಮಾರುತದ ಅಲೆಗಳು ಸೃಷ್ಟಿಯಾಗಿದ್ದು, ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ
ಈಗಾಗಲೇ ಭಾರಿ ಮಳೆ, ಜಲಪ್ರಳಯ ಮತ್ತು ಭೂಕುಸಿತದಿಂದ ತತ್ತರಿಸಿರುವ ಇಡುಕ್ಕಿ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ವರ್ಷಧಾರೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮತ್ತೆ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ತುರ್ತು ನೆರವು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ.
ಈಗಾಗಲೇ ಕೇರಳದಲ್ಲಿರುವ ಎನ್‍ಡಿಆರ್‍ಎಫ್‍ನ ಐದು ತಂಡಗಳು ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ.
ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಮುದ್ರ ತೀರ ಪ್ರದೇಶಗಳು ಮತ್ತು ಗುಡ್ಡಗಾಡು-ಪರ್ವತ ಸ್ಥಳಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಕಳೆದ ತಿಂಗಳು ಕೇರಳ ರಾಜ್ಯದಲ್ಲಿ ಭಾರೀ ಮಳೆ ಮತ್ತು ಜಲಪ್ರಳಯದಿಂದ 800ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಹಸ್ರಾರು ಜನರು ಸಂತ್ರಸ್ತಗೊಂಡಿದ್ದರು.
ಪುದುಚೇರಿಯಲ್ಲೂ ಭಾರಿ ಮಳೆ : ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಇಂದು ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ.