ವಾಷಿಂಗ್ಟನ್, ಅ.4 – ಮೋಸ, ವಂಚನೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಅಕ್ರಮ-ಅವ್ಯವಹಾರಗಳಲ್ಲಿ ತೊಡಗಿದ್ದ ಭಾರತದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ವಿಶ್ವಬ್ಯಾಂಕ್ ತನ್ನ ವಿವಿಧ ಯೋಜನೆಗಳಿಂದ ಡಿಬಾರ್ ಮಾಡಿದೆ.
ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿರುವ ವಿಶ್ವ ಬ್ಯಾಂಕ್ ಭಾರತದ ಆಲಿವ್ ಹೆಲ್ತ್ ಕೇರ್ ಮತ್ತು ಜೈ ಮೋದಿ ಸೇರಿದಂತೆ 78 ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ವಂಚನೆ ಮತ್ತು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಡಿಬಾರ್ ಮಾಡಲಾಗಿದೆ ಎಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಲಿವ್ ಮತ್ತು ಜೈ ಮೋದಿ ಕಂಪನಿಗಳು ಭಾರೀ ಭ್ರಷ್ಟಾಚಾರ ಮತ್ತು ವಂಚನೆಯಲ್ಲಿ ತೊಡಗಿದ್ದವು. ಆಲಿವ್ ಹೆಲ್ತ್ನನ್ನು 10 ವರ್ಷ, ಆರು ತಿಂಗಳು ಡಿಬಾರ್ ಮಾಡಲಾಗಿದೆ. ಮೋದಿ ಸಂಸ್ಥೆಯನ್ನು ಏಳು ವರ್ಷ, ಆರು ತಿಂಗಳು ಡಿಬಾರ್ ಮಾಡಲಾಗಿದೆ ಎಂದು ಡಬ್ಲ್ಯುಬಿ ವರದಿಯಲ್ಲಿ ತಿಳಿಸಲಾಗಿದೆ.
ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಮೂಲದ ಏಂಜೆಲಿಕ್ ಇಂಟರ್ನ್ಯಾಷನಲ್ ಲಿಮಿಟೆಡ್, ಫ್ಯಾಮಿಲಿ ಕೇರ್, ಮಧುಕಾನ್ ಪ್ರಾಜೆಕ್ಟ್ಸ್, ಆರ್.ಕೆ.ಡಿ. ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್, ತಾರ್ವೆ ಗ್ಲೋಬರ್ ಎನ್ವಿರಾನ್ಮೆಂಟ್ ಪ್ರೈವೇಟ್ ಲಿಮಿಟೆಡ್, ಎಸ್ಎಂಇಸಿ(ಇಂಡಿಯಾ) ಪ್ರೈ.ಲಿ., ಮ್ಯಾಕ್ಲಿಯೋಡ್ಸ್ ಫಾರ್ಮಸೂಟಿಕಲ್ಸ್ ಲಿಮಿಟೆಡ್ ಸೇರಿದಂತೆ 78 ಕಂಪನಿಗಳನ್ನು ಡಿಬಾರ್ ಮಾಡಲಾಗಿದೆ.
ಈ ಕಂಪನಿಗಳನ್ನು ವಿಶ್ವದ ವಿವಿಧ ದೇಶಗಳಲ್ಲಿ ವಿಶ್ವಬ್ಯಾಂಕ್ನ ಅಭಿವೃದ್ದಿ ಕಾರ್ಯಕ್ರಮಗಳಿಗೆ ನೆರವಾಗಲು ನಿಯೋಜಿಸಲಾಗಿತ್ತು. ಆದರೆ ಇವು ಮೋಸ, ವಂಚನೆ, ಲಂಚುರುಷುವತ್ತು, ಭ್ರಷ್ಟಾಚಾರ ಮೊದಲಾದ ಅಕ್ರಮಗಳಲ್ಲಿ ತೊಡಗಿದ್ದವು. ಕಳೆದ ಕೆಲವು ವರ್ಷಗಳಿಂದ ಈ ಸಂಸ್ಥೆಗಳ ಮೇಲೆ ನಿಗಾ ಇಟ್ಟಿದ್ದ ವಿಶ್ವಬ್ಯಾಂಕ್ನ ಈ ತಪ್ಪಿತಸ್ಥ ಕಂಪನಿಗಳು ಮತ್ತು ವ್ಯಕ್ತಿಗಳ ವಿರುದ್ಧ ಡಿಬಾರ್ ಕ್ರಮ ಕೈಗೊಂಡಿದೆ.