
ನವದೆಹಲಿ: ಸಂಪುಟ ವಿಸ್ತರಣೆಗೆ ಸಂಭಾವ್ಯ ದಿನಾಂಕ ನಿಶ್ಚಯವಾಗಿರುವ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ನಿಗಮ-ಮಂಡಳಿ ಯಾವ ಶಾಸಕರಿಗೆ ಎಂಬ ಚರ್ಚೆ ಶುರುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ದೌಡಾಯಿಸಲು ರೆಡಿಯಾಗಿದ್ದಾರೆ. ಆಕಾಂಕ್ಷಿಗಳ ಹೆಚ್ಚಳದಿಂದಾಗಿ ಕೈ ನಾಯಕರಲ್ಲಿ ತಳಮಳ ಉಂಟಾಗಿದೆ.
ಇದೇ ತಿಂಗಳ 11 ಅಥವಾ 12 ಕ್ಕೆ ಸಂಪುಟ ವಿಸ್ತರಣೆ ಆಗಲಿದೆ ಅನ್ನೋ ಮಾಹಿತಿ ಅರಿತಿರೋ ಆಕಾಂಕ್ಷಿಗಳು, ಮಂತ್ರಿ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಲು ಮುಂದಾಗಿದ್ದಾರೆ. ರಾಜ್ಯಮಟ್ಟದಲ್ಲಿ ಈಗಾಗಲೇ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್, ಡಿಕೆಶಿ ಮೇಲೆ ಒತ್ತಡ ಹೇರಿದ್ದ ಆಕಾಂಕ್ಷಿಗಳು ಸಂಪುಟ ವಿಸ್ತರಣೆ ಹೈಕಮಾಂಡ್ ಹೆಗಲಿಗೆ ಬಿದ್ದಿರೋ ಹಿನ್ನಲೆಯಲ್ಲಿ ಇದೀಗ ದೆಹಲಿಯಲ್ಲೇ ಬೀಡು ಬಿಟ್ಟು ಲಾಬಿ ನಡೆಸಲಿದ್ದಾರೆ ಎನ್ನಲಾಗಿದೆ.
ಆದರೆ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಬೇಡವೇ ಅನ್ನೋ ಗೊಂದಲದಲ್ಲಿರೋ ಹೈಕಮಾಂಡ್ ಉಪಚುನಾವಣೆ, ಲೋಕಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡಿದರೆ ಹೇಗೆ ಅನ್ನೋ ಬಗ್ಗೆಯೂ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ಸಂಪುಟವಿಸ್ತರಣೆಯಾದರೆ ಅತೃಪ್ತ ಶಾಸಕರು ಪಕ್ಷದ ವಿರುದ್ಧ ಕೆಲಸ ಮಾಡ್ತಾರೆ ಅನ್ನೋ ಭೀತಿ ಕಾಂಗ್ರೆಸ್ ನಾಯಕರದ್ದಾಗಿದೆ. ಹಾಗಾಗಿ ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಮುಂದಾಗಿದೆ.
ಅಕ್ಟೋಬರ್ 6 ರಂದು ಸಂಪುಟ ವಿಸ್ತರಣೆ ವಿಚಾರ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ