ಬೆಂಗಳೂರು, ಅ.4- ಇತಿಹಾಸ ಪ್ರಸಿದ್ಧ ಮಡಿವಾಳ ಕೆರೆಯಲ್ಲಿ ರಾಶಿ ರಾಶಿ ಬಸವನ ಹುಳುಗಳು ಪತ್ತೆಯಾಗಿದ್ದು, ಇವುಗಳಲ್ಲಿ ಬಹುತೇಕ ಹುಳುಗಳು ಸಾವನ್ನಪ್ಪಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ.
ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಕಲುಷಿತ ನೀರು ಮಡಿವಾಳ ಕೆರೆ ಸೇರಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಮಡಿವಾಳ ಕೆರೆಯಲ್ಲಿ ಮೀನುಗಳು ಸೇರಿದಂತೆ ಸಾವಿರಾರು ಜಲಚರಗಳು ಸಾವನ್ನಪ್ಪಿದ್ದವು. ಇದೀಗ ಸಾವಿರಾರು ಬಸವನ ಹುಳುಗಳು ಕೆರೆ ದಡದಲ್ಲಿ ಪತ್ತೆಯಾಗಿದ್ದವು. ಬಹುತೇಕ ಹುಳುಗಳು ಸಾವನ್ನಪ್ಪಿರುವುದರಿಂದ ಈ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಸವನ ಹುಳುಗಳು ಶುದ್ಧ ನೀರಿರುವ ಪ್ರದೇಶದಲ್ಲಿರುತ್ತವೆ. ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಹುಳುಗಳು ಕೆರೆಯಿಂದ ಹೊರಬಂದು ದಡದಲ್ಲಿ ಸಾವನ್ನಪ್ಪಿವೆ.
ಕಳೆದ 10 ದಿನಗಳಿಂದ ಕೆರೆ ದಡದಲ್ಲಿ ಸಾವಿರಾರು ಬಸವನ ಹುಳುಗಳಿದ್ದವು. ಆದರೆ, ಇಂದು ಅವುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಕಳೆದ 10 ವರ್ಷಗಳಿಂದ ಈ ಪ್ರದೇಶದಲ್ಲೇ ವಾಸಿಸುತ್ತಿದ್ದೇನೆ. ಇಂತಹ ಸ್ಥಿತಿ ಯಾವ ಸಮಯದಲ್ಲೂ ಬಂದಿರಲಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಕಾಶ್.
ಚೋಳದೊರೆಗಳು 300 ವರ್ಷಗಳ ಹಿಂದೆ 115 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಮಡಿವಾಳ ಕೆರೆ ಕಳೆದ 1990ರ ವರೆಗೂ ಸ್ಥಳೀಯರ ಕುಡಿಯುವ ನೀರಿನ ಆಧಾರ ಸ್ತಂಭವಾಗಿತ್ತು. ಆಧುನಿಕತೆ ಭರದಲ್ಲಿ ಮಡಿವಾಳ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು, ಈಗ ಕೆಲವೇ ಕೆಲವು ಎಕರೆಗಳಿಗೆ ಮಾತ್ರ ಸೀಮಿತವಾಗಿರುವ ಈ ಕೆರೆಗೆ ಸುತ್ತಮುತ್ತಲ ಪ್ರದೇಶಗಳ ಮಲಿನ ನೀರು ಹರಿದು ಬರುತ್ತಿರುವುದೇ ಇಷ್ಟೆಲ್ಲ ದುರಂತಕ್ಕೆ ಕಾರಣ ಎನ್ನಲಾಗಿದೆ.