ಚುನಾವಣಾಪೂರ್ವ ಮೈತ್ರಿ: ಕಾಂಗ್ರೆಸ್​​ ಜೊತೆಗೆ ಮೈತ್ರಿಗೆ ಮುಂದಾಗದ ಬಿಎಸ್​ಪಿ? ಇಲ್ಲಿದೆ ಅಸಲಿ ಕಾರಣ..

ನವದೆಹಲಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಪಕ್ಷದೊಂದಿಗೆ ಮೈತ್ರಿಯಾಗದೇ ಪ್ರತ್ಯೇಕವಾಗಿ ಸ್ಪರ್ಧಿಸಲು ಮುಂದಾಗಿರುವ ಬಹುಜನ ಸಮಾಜವಾದಿ ಪಕ್ಷದ ಹಿಂದಿನ ಅಸಲಿ ಕಾರಣವೇನು ಎಂಬುದನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಬಿಎಸ್​ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಒಂದೇ ಒಂದು ಸೀಟು ಗೆಲ್ಲಲ್ಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಮಲ್​ ನಾಥ್​​ ಅವರು, ಇದೇ ಡಿಸೆಂಬರ್ ತಿಂಗಳಿನಲ್ಲಿ ಎದುರಾಗುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​​ ಬಿಎಸ್​​ಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ಈ ಬೆನ್ನಲ್ಲೇ ನಮ್ಮೊಂದಿಗೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ಮೈತ್ರಿ ಆಸೆಗೆ ಮಾಯಾವತಿ ಕಣ್ಣೀರೆರಚಿದ್ದಾರೆ.
ಮಾಯಾವತಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಎಲ್ಲೆಲ್ಲಿ ಕಣಕ್ಕಿಳಿಸಿಸಲು ನಿರ್ಧರಿಸಿದ್ದರೋ, ಅಲ್ಲೆಲ್ಲ ಬಿಎಸ್ಪಿ ಗೆಲ್ಲುವುದಕ್ಕೆ ಸಾಧ್ಯವಿರಲಿಲ್ಲ. ಅವರು ಸ್ಪರ್ಧಿಸಲು ಮುಂದಾಗಿದ್ದ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ಇರಲಿಲ್ಲ. ಹಾಗಾಗಿ ಬಿಎಸ್ಪಿ ಗೆಲ್ಲಲು ಎಲ್ಲಿ ಸಾಧ್ಯವಿದೆಯೋ, ಆ ಕ್ಷೇತ್ರಗಳನ್ನು ಪಟ್ಟಿ ಮಾಡಿ ಕೊಡಿ. ಅಲ್ಲಿ ನಿಲ್ಲಿಸಿ ಗೆಲ್ಲಿಸೋಣ ಎಂದು ಮಾಯಾವತಿಯವರಿಗೆ  ತಿಳಿಸಿದೆವು.
ಹಾಗೆಯೇ ಸೋಲಬಹುದಾದ ಕ್ಷೇತ್ರಗಳಲ್ಲಿ ನಿಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬಾರದು. ಗೆಲ್ಲುವ ಕ್ಷೇತ್ರಗಳನ್ನು ಆಯ್ಕೆ ಮಾಡಿ ಎಂದು ಕಾಂಗ್ರೆಸ್​​ ಮನವಿ ಮಾಡಿತ್ತು. ಆದರೆ ಇದಕ್ಕೆ ಒಪ್ಪಲು ಬಿಎಸ್ಪಿ ಅಧಿನಾಯಕಿ ಮಾಯಾವತಿಯವರಿಗೆ ಇಷ್ಟವಿರಲಿಲ್ಲ. ಅವರ ಒಳ್ಳೆಯದಕ್ಕೆ ಹೇಳಿದರೂ, ನಮ್ಮ ಮಾತು ಕೇಳದೆ ಮೈತ್ರಿ ಬೇಡವೆಂದು ಹೊರನಡೆದಿದ್ದಾರೆ. ಹೀಗಾಗಿ ಬಿಎಸ್​​ಪಿ ಪಕ್ಷ ಎಲ್ಲಿ ನಿಂತರು ಒಂದು ಸೀಟು ಗೆಲ್ಲವುದು ಕಷ್ಟ ಎಂದಿದ್ದಾರೆ.
ಈಗಾಗಲೇ ಮೂರು ರಾಜ್ಯಗಳಲ್ಲಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಬಿಎಸ್​ಪಿ ಕಾಂಗ್ರೆಸ್​​ಗೆ ಕೈಕೊಟ್ಟಿದೆ. ಛತ್ತೀಸಗಡ, ರಾಜಸ್ಥಾನ, ಮಧ್ಯಪ್ರದೇಶದಲ್ಲಿಯೂ ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ ಎನ್ನುವ ಮೂಲಕ ಮಾಯಾವತಿ ಅವರು ಮೈತ್ರಿ ವಿಚಾರಕ್ಕೆ ತೆರೆ ಎಳೆದಿದ್ಧಾರೆ. ಹೀಗಾಗಿಯೇ ಬಿಜೆಪಿಯನ್ನು ಸೋಲಿಸಲು ಮೈತ್ರಿಗೆ ಮುಂದಾಗಿದ್ದ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ತಜ್ಞರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇಸರಿ ವಿರೋಧಿ ಪಡೆ ಕಟ್ಟಲು ಕಾಂಗ್ರೆಸ್ ನಿರ್ಧರಿಸಿತ್ತು. ಬಿಎಸ್​ಪಿ ಬೆನ್ನಲ್ಲೇ ತೆಲಂಗಾಣದಲ್ಲಿಯೂ ಕೂಡ ಟಿಆರ್​​ಎಸ್​​ ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಬೇಡ ಎಂದಿದೆ. ಛತ್ತೀಸ್​ಗಡದಲ್ಲೂ ಮಾಯಾವತಿ ನಿರ್ಧಾರದಿಂದ ಕಾಂಗ್ರೆಸ್​ಗೆ ನಷ್ಟವಾಗಿದೆ. ಹಾಗಾಗಿ ಮುಂದೆ ಇನ್ನೂ ಏನೆಲ್ಲ? ರಾಜಕೀಯ ಬೆಳವಣಿಗೆಗಳನ್ನು ನಡೆಯಲಿವೆ ಎಂದು ಕಾದು ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ