
ಬೆಂಗಳೂರು, ಅ.3-ರಾಜ್ಯ ರಾಜಕಾರಣದಲ್ಲಿ ಬಂಡಾಯದ ಬಿಸಿ ತಣ್ಣಗಾದ ಹೊತ್ತಿನಲ್ಲೇ ಕಾಂಗ್ರೆಸ್ನ ಇಬ್ಬರು ಶಾಸಕರಿಗೆ ವಿಶೇಷ ತನಿಖಾ ದಳ (ಎಸ್ಐಟಿ) ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಬೇಲೇಕೇರಿ ಬಂದರು ಅದಿರು ಕಳ್ಳಸಾಗಾಣಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮನವಿ ಆಧರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ.ಪಾಟೀಲ್ ಅವರು, ಕಾಂಗ್ರೆಸ್ನ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ಸಿಂಗ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
2009ರಲ್ಲಿ ಆನಂದ್ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಕಂಪೆನಿಯಿಂದ ಅದಿರನ್ನು ಸಿಂಗಾಪುರ ಮತ್ತು ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಆರೋಪವಿದೆ. ಆನಂದ್ಸಿಂಗ್ ಜೊತೆಗೆ ನಾಗೇಂದ್ರ ಒಡೆತನದ ಕಂಪೆನಿಯು ಈ ಅಕ್ರಮದಲ್ಲಿ ಭಾಗಿಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಪ್ರಕರಣ ಸಿಬಿಐನಿಂದ ವಿಚಾರಣೆಗೊಳಪಟ್ಟು ಆನಂದ್ಸಿಂಗ್ ಬಂಧನಕ್ಕೊಳಗಾಗಿ, ಕೆಲ ದಿನ ಜೈಲು ವಾಸವನ್ನೂ ಅನುಭವಿಸಿದ್ದರು. ಅನಂತರ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ವಿಚಾರಣೆಗೆ ಹಾಜರಾಗುವಂತೆ ಹಲವಾರು ಬಾರಿ ನೋಟೀಸ್ ನೀಡಿದ್ದರೂ ಈ ಇಬ್ಬರು ಶಾಸಕರು ಗೈರು ಹಾಜರಾಗಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಬ್ಬರೂ ಶಾಸಕರಿಗೆ ಎಸ್ಐಟಿಯಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಆನಂದ್ಸಿಂಗ್ ಮತ್ತು ನಾಗೇಂದ್ರ ಅವರು ಸಚಿವ ಸಂಪುಟದಲ್ಲಿ ಸ್ಥಾನ ಗಳಿಸಲು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಗುಂಪುಗಾರಿಕೆ ಚಟುವಟಿಕೆಯಲ್ಲಿ ನಾಗೇಂದ್ರ ಅವರು ಸಚಿವ ರಮೇಶ್ ಜಾರಕಿ ಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು.
ಜಾರಕಿ ಹೊಳಿ ಸಹೋದರರ ಗುಂಪು ಒಂದು ಹಂತದಲ್ಲಿ ಸರ್ಕಾರವನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಸಿತ್ತು ಎಂಬ ಚರ್ಚೆಗಳು ನಡೆದವು. ಅವೆಲ್ಲ ತಣ್ಣಗಾಗಿ ಸಮ್ಮಿಶ್ರ ಸರ್ಕಾರ ಸುಲಲಿತ ಆಡಳಿತ ನಡೆಸುತ್ತಿದೆ ಎನ್ನುವ ಹಂತದಲ್ಲಿ ಎಸ್ಐಟಿ ನೀಡಿರುವ ಜಾಮೀನು ರಹಿತ ವಾರೆಂಟ್ ಬಳ್ಳಾರಿ ಜಿಲ್ಲೆಯ ಈ ಶಾಸಕರಲ್ಲಿ ಅಸಮಾಧಾನವನ್ನು ಕೆರಳಿಸಿದೆ.
ವಾರೆಂಟ್ ಬಂದಿರುವುದು ನಿಜ:
ಜಾಮೀನು ರಹಿತ ವಾರೆಂಟ್ ಕುರಿತು ಪ್ರತಿಕ್ರಿಯಿಸಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರು, ನನಗೆ ವಾರೆಂಟ್ ಬಂದಿರುವುದು ನಿಜ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಯಾಗಿದೆ. ಈ ಮೊದಲು ನ್ಯಾಯಾಲಯ ನೀಡಿದ ಸಮನ್ಸ್ಗಳಲ್ಲಿ ಹಾಜರಾಗಬೇಕಾದ ದಿನಾಂಕಗಳ ಬಗ್ಗೆ ಗೊಂದಲಗಳಿದ್ದವು. ಹಾಗಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈಗ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡು ಯಾವ ದಿನದಂದು ಹಾಜರಾಗಬೇಕೆಂಬ ಸ್ಪಷ್ಟತೆ ಪಡೆದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.