
ಬೆಂಗಳೂರು, ಅ.3- ಸಚಿವ ಸಂಪುಟ ಆಕಾಂಕ್ಷಿಗಳ ಒತ್ತಡದಿಂದ ತಪ್ಪಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣಿನ ಶೋಂಕಿನ ನೆಪ ಹೇಳಿ ಯಾರನ್ನೂ ಭೇಟಿ ಮಾಡದೆ ದೂರ ಉಳಿದಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಚರ್ಚೆಗಳು ಆರಂಭವಾಗುತ್ತಿದ್ದಂತೆ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ನಾಯಕರ ಬೆನ್ನು ಬಿದ್ದಿದ್ದು, ಬಿಡುವಿಲ್ಲದಂತೆ ಭೇಟಿ ಮಾಡುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ ಯಾವ ಭರವಸೆ ಕೊಡುವ ಸ್ಥಿತಿಯಲ್ಲಿ ಯಾವ ನಾಯಕರೂ ಇಲ್ಲ. ಹೀಗಾಗಿ ಆಕಾಂಕ್ಷಿಗಳು ಬಂದು ಭೇಟಿ ಮಾಡಿದಾಗ ಏನೋ ಒಂದು ನೆಪ ಹೇಳುವ ಬದಲು ಭೇಟಿ ಮಾಡದೇ ಇರುವುದು ಸೂಕ್ತ ಎಂದು ಬಹಳಷ್ಟು ನಾಯಕರು ಇಲ್ಲ ಸಲ್ಲದ ಸಬೂಬು ಹೇಳಿ ದೂರು ಉಳಿಯುತ್ತಿದ್ದಾರೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಶಾಸಕರು ಹಾಗೂ ಕಾರ್ಯಕರ್ತರ ಸಂಖ್ಯೆ ಹೆಚ್ಚಿದೆ.
ಇಂದು ಬೆಳಗ್ಗೆ ಶಿವಮೊಗ್ಗದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿಗೆ ಮುಂದಾದರು. ಪೆÇಲೀಸರು ಎಷ್ಟೇ ಮನವೊಲಿಸಿದರೂ ಕಾರ್ಯಕರ್ತರು ಜಪ್ಪಯ್ಯ ಅನ್ನಲಿಲ್ಲ.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಜಿಲ್ಲಾ ಪ್ರವಾಸದ ವೇಳೆ ಕಣ್ಣಿಗೆ ಧೂಳು ಬಿದ್ದು ವಿಶ್ರಾಂತಿಯಲ್ಲಿದ್ದಾರೆ. ಯಾರನ್ನೂ ಭೇಟಿ ಮಾಡುವುದಿಲ್ಲ ಎಂಬ ಕಾರಣ ಹೇಳಿ ಅಧಿಕಾರಿಗಳು ಶಿವಮೊಗ್ಗದ ಕಾರ್ಯಕರ್ತರನ್ನು ಸಾಗಾಕಿದರು.
ಶಿವಮೊಗ್ಗದ ಕಾರ್ಯಕರ್ತರು ಬಂದು ಹೋದ ನಂತರ ಹಲವಾರು ಶಾಸಕರು ಸಿದ್ದರಾಮಯ್ಯ ಅವರ ಸರ್ಕಾರಿ ಬಂಗಲೆ ಕಾವೇರಿಗೆ ಆಗಮಿಸಿದರಾದರೂ ಸಿದ್ದರಾಮಯ್ಯ ಯಾರನ್ನೂ ಭೇಟಿ ಮಾಡದೆ ತಮ್ಮ ಪಾಡಿಗೆ ತಾವು ಉಳಿದುಕೊಂಡರು.