
ನವದೆಹಲಿ: ಪರಿಸರ ಸಂರಕ್ಷಣೆಗೆ ಸಂಬಂಧಿಸದಂತೆ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪುರಸ್ಕಾರ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ಪ್ರಶಸ್ತಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಿದರು.
ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದ ನಡೆದ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಪರಿಸರ ಸಂರಕ್ಷಣೆಗೆ ಭಾರತೀಯರು ಬದ್ಧರಾಗಿದ್ದು, ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.
ಆದಿವಾಸಿಗಳು ಜೀವಕ್ಕಿಂತ ಹೆಚ್ಚಾಗಿ ಅರಣ್ಯ ಪ್ರದೇಶವನ್ನು ಪ್ರೀತಿಸುತ್ತಾರೆ. ಮಣ್ಣನ್ನು ರೈತರು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಪ್ರಕೃತಿ ವಿಕೋಪ ತಡೆಗೆ ಪರಿಸರ ಸಂರಕ್ಷಣೆ ಅತ್ಯಗತ್ಯ. ಪರಿಸರ ಸಂರಕ್ಷಕರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ವಿಶ್ವಸಂಸ್ಥೆಯ ಈ ಪ್ರಶಸ್ತಿ ಭಾರತಕ್ಕೆ ಸಂದ ಗೌರವವಾಗಿದೆ. ಭಾರತದ ಸಂಸ್ಕೃತಿ ಭೂಮಿಯೊಂದಿಗೆ ಸಮ್ಮಿಳಿತವಾಗಿದೆ. ಈ ಪ್ರಶಸ್ತಿ ದೇಶದ ಕೋಟ್ಯಂತರ ರೈತರಿಗೆ ಸಂದ ಗೌರವವಾಗಿದೆ. ಇದು ಅರಣ್ಯ ಸಂರಕ್ಷಕರಿಗೂ ಸಂದ ಸನ್ಮಾನ. ನಿಮ್ಮ ತಾಯಿಯಂತಿರುವ ಭೂಮಿ ಅಪಾಯದಲ್ಲಿದೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನನ್ನ ಕೆಲಸ ದೇವರ ಕೆಲಸ ಎಂದುಕೊಂಡಿದ್ದೇನೆ ಎಂದ ಪ್ರಧಾನಿ, 2022ರೊಳಗೆ ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ ಹೊಂದಲಾಗಿದೆ ಎಂದರು.