ಬೆಂಗಳೂರು, ಅ.3- ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಉದ್ಘಾಟಕರಾದ ಇನ್ಫೋಸಿಸ್ ಫೌಂಡೇಶನ್ನ ಸಂಸ್ಥಾಪಕರಾದ ಸುಧಾ ಮೂರ್ತಿ ಅವರನ್ನು ಸಂಪ್ರದಾಯದ ರೀತಿ ಇಂದು ಅಧಿಕೃತ ಆಹ್ವಾನ ನೀಡಲಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನೇತೃತ್ವದ ನಿಯೋಗ ಇಂದು ನಗರಕ್ಕೆ ಆಗಮಿಸಿ ಸುಧಾಮೂರ್ತಿಯವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲತಾಂಬೂಲ ನೀಡಿ ಅಭಿನಂದಿಸಿ ದಸರಾ ಉತ್ಸವಕ್ಕೆ ಆಹ್ವಾನಿಸಿತು.
ಇಂದು ಬೆಳಗ್ಗೆ ಸಚಿವರ ನೇತೃತ್ವದ ಜಿಲ್ಲಾ ಮಟ್ಟದ ನಿಯೋಗ ಸುಧಾಮೂರ್ತಿ ಅವರ ಪ್ರತಿಷ್ಠಾನದ ಕಚೇರಿಗೆ ತೆರಳಿ ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ಈ ವೇಳೆ ಸುಧಾಮೂರ್ತಿ ಮಾತನಾಡಿ, ದಸರಾ ಮಹೋತ್ಸವ ನಮ್ಮ ನಾಡಿನ ಹೆಮ್ಮೆಯ ಪ್ರತೀಕ. ಈ ಬಾರಿಯ ದಸರಾ ಉತ್ಸವಕ್ಕೆ ನನಗೆ ಆಹ್ವಾನ ನೀಡಿರುವುದಕ್ಕೆ ಬಹಳ ಸಂತಸವಾಗಿದೆ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಅತಿ ದೊಡ್ಡ ಗೌರವವಾಗಿದೆ ಎಂದರು.
ನಾನು 8 ವರ್ಷ ವಯಸ್ಸಿನವಳಾಗಿದ್ದಾಗ ಮೊದಲ ಬಾರಿಗೆ ದಸರಾ ವೀಕ್ಷಿಸಿದ್ದೆ. ಈಗ 68ನೇ ವಯಸ್ಸಿನಲ್ಲಿ ದಸರಾ ಉದ್ಘಾಟಿಸುವ ಸೌಭಾಗ್ಯ ದೊರೆತಿದೆ. ದಸರಾ ಈಗ ಬಹಳಷ್ಟು ಬದಲಾಗಿದೆ. ಹತ್ತು ದಿನಗಳ ಕಾಲ ಮನೆಯಲ್ಲಿ ಮಾಡುತ್ತಿದ್ದ ಸಿಹಿ, ಬಣ್ಣದ ರಿಬ್ಬನ್ ಈಗಲೂ ನಮ್ಮ ಕಣ್ಣ ಮುಂದೆ ಬರುತ್ತಿವೆ. ಹತ್ತು ದಿನಗಳ ಮೈಸೂರಿನಲ್ಲೇ ಇರಬೇಕೆಂದಿದ್ದೇನೆ ಎಂದು ಹೇಳಿದರು.
ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೂ ಈ ನಿಯೋಗ ದಸರಾದ ಆಹ್ವಾನ ನೀಡಿತು.
ಈ ಸಂದರ್ಭದಲ್ಲಿ ರೇಷ್ಮೆ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎಚ್. ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಮತ್ತಿತರರು ಇದ್ದರು.