ಬೆಂಗಳೂರು, ಅ.3- ಸಚಿವ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದ್ದು, ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ, ಕರ್ನಾಟಕದಲ್ಲಿ ಹಿರಿಯ ಮುಖಂಡರ ಮನೆ ಮುಂದೆ ಶಾಸಕರ ಬೆಂಬಲಿಗರು ದಂಡು ದಂಡಾಗಿ ಬಂದು ಒತ್ತಡ ಹೇರಲಾರಂಭಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇದೇ ತಿಂಗಳು 12ರಂದು ನಡೆಯುವ ಸಾಧ್ಯತೆಗಳಿದ್ದು, ಈ ಕುರಿತು ಚರ್ಚೆಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅ.6ರಂದು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇವರ ನಂತರ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಯ ಕಸರತ್ತು ನಡೆಸಲಿದ್ದಾರೆ.
ಸಮನ್ವಯ ಸಮಿತಿ ಸಭೆ ನಡೆಸಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಈ ಬಾರಿ ಸಂಪುಟದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ಮಾತ್ರ ಎಲ್ಲಾ ಹುದ್ದೆಗಳನ್ನು ಏಕಕಾಲಕ್ಕೆ ಭರ್ತಿ ಮಾಡುವ ಧೈರ್ಯ ಪ್ರದರ್ಶಿಸಲು ಹಿಂದೇಟು ಹಾಕುತ್ತಿದೆ. ಖಾಲಿ ಇರುವ 6 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮಾತ್ರ ಸಚಿವರನ್ನು ನೇಮಿಸುವುದು ಸೂಕ್ತ ಎಂಬ ಸಲಹೆಗಳು ಕೇಳಿ ಬರುತ್ತಿವೆ.
ಆರು ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ಲಿಂಗಾಯಿತ ಸಮುದಾಯದಿಂದ ಎಂ.ಬಿ.ಪಾಟೀಲ್, ಲಕ್ಷ್ಮೀಹೆಬ್ಬಾಳ್ಕರ್, ಬಿ.ಕೆ.ಸಂಗಮೇಶ್, ಬಿ.ಸಿ.ಪಾಟೀಲ್, ಕುರುಬ ಸಮುದಾಯದಿಂದ ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಎಚ್.ಎಂ.ರೇವಣ್ಣ, ನಾಯಕ ಸಮುದಾಯದಿಂದ ಆರ್.ನಾಗೇಂದ್ರ, ತುಕಾರಾಮ್, ಲಂಬಾಣಿ ಸಮುದಾಯದಿಂದ ಪಿ.ಟಿ.ಪರಮೇಶ್ವರ್ನಾಯಕ್, ಭೀಮಾನಾಯಕ್, ದಲಿತ ಸಮುದಾಯದಿಂದ ರೂಪಾ ಶಶಿಧರ್, ಅಲ್ಪಸಂಖ್ಯಾತ ಸಮುದಾಯದಿಂದ ಆರ್.ರೋಷನ್ ಬೇಗ್, ತನ್ವೀರ್ಸೇಠ್, ಎನ್.ಎ.ಹ್ಯಾರಿಸ್, ರಹೀಮ್ಖಾನ್, ಒಕ್ಕಲಿಗ ಸಮುದಾಯದಿಂದ ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್, ಎಂ.ಕೃಷ್ಣಪ್ಪ, ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ, ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಹುದ್ದೆ ಗಿಟ್ಟಿಸಲು ಕೆಳಹಂತದಿಂದ ಹೈಕಮಾಂಡ್ವರೆಗೂ ಪ್ರಬಲ ಲಾಬಿ ನಡೆಸುತ್ತಿದ್ದಾರೆ.
ಸಚಿವ ಸ್ಥಾನದ ಕೆಲವು ಆಕಾಂಕ್ಷಿಗಳು ಈಗಾಗಲೇ ದೆಹಲಿಗೆ ತೆರಳಿದ್ದು, ಅಲ್ಲಿ ಹಿರಿಯ ನಾಯಕರ ಬೆನ್ನುಬಿದ್ದಿದ್ದಾರೆ. ಕರ್ನಾಟಕದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಗಳತ್ತ ಸಚಿವ ಸ್ಥಾನದ ಆಕಾಂಕ್ಷಿಗಳು ಯಡತಾಕುತ್ತಿದ್ದಾರಷ್ಟೇ ಅಲ್ಲದೆ, ತಮ್ಮ ಬೆಂಬಲಿಗರನ್ನು ಕರೆತಂದು ನಾಯಕರ ಮನೆ ಮುಂದೆ ಜೈಕಾರ ಕೂಗಿಸುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ನಾಯಕರ ನಿದ್ದೆಗೆಡಿಸಲಾರಂಭಿಸಿದೆ. ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದು, ಸಚಿವ ಸ್ಥಾನ ಸಿಗದಿದ್ದರೆ ಪಕ್ಷ ತೊರೆಯುವ ಮನಸ್ಥಿತಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಸಂಪುಟ ವಿಸ್ತರಣೆಯಾದರೆ ಅತೃಪ್ತಿ ಮತ್ತು ಬಂಡಾಯ ಹೆಚ್ಚಾಗಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಹಾಗೂ ಸಮ್ಮಿಶ್ರ ಸರ್ಕಾರದ ಅಸ್ಥಿತ್ವಕ್ಕೆ ಧಕ್ಕೆಯಾಗುವ ಆತಂಕವಿದೆ ಎಂಬ ವಿಷಯವೂ ಕಾಂಗ್ರೆಸ್ನಲ್ಲಿ ಕೇಳಿ ಬರುತ್ತಿದೆ.
ಈವರೆಗೂ ಸಂಭವಿಸಿರುವ 2-3 ಗುಂಪುಗಾರಿಕೆಯ ಪ್ರಮುಖ ಪ್ರಕರಣಗಳನ್ನು ಕಾಂಗ್ರೆಸ್ ಹೇಗೋ ನಿಭಾಯಿಸಿದೆ. ಆದರೆ, ಸಂಪುಟ ವಿಸ್ತರಣೆಯ ನಂತರ ಸೃಷ್ಟಿಯಾಗುವ ರಾಜಕೀಯ ಕ್ರಾಂತಿಯನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ಕಾಲ ಕಾಲಕ್ಕೆ ಒಂದೊಂದು ಸಬೂಬುಗಳನ್ನು ಹೇಳಿ ಕಾಲಹರಣ ಮಾಡುವುದು ಸೂಕ್ತ ಎಂಬ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ದಿನಾಂಕ ಘೋಷಣೆ ಮಾಡಿರುವುದರಿಂದ ಈ ಬಾರಿ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದ್ದರೂ ಸಹ ಕಾಂಗ್ರೆಸ್ನಲ್ಲಿನ ಗೊಂದಲದಿಂದಾಗಿ ಮತ್ತೆ ಮುಂದಕ್ಕೆ ಹೋಗಲಿದೆಯೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.