ರಸ್ತೆ ಗುಂಡಿ ಮುಚ್ಚದ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರಿಗೆ ಒಂದೂವರೆ ಲಕ್ಷ ರೂ. ದಂಡ

ಬೆಂಗಳೂರು, ಅ.3- ರಸ್ತೆ ಗುಂಡಿ ಸಮರ್ಪಕವಾಗಿ ಮುಚ್ಚದ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರಿಗೆ ಮೇಯರ್ ಗಂಗಾಂಬಿಕೆ ಅವರು ಒಂದೂವರೆ ಲಕ್ಷ ರೂ. ದಂಡ ವಿಧಿಸಿದ್ದಾರೆ.
ನಿನ್ನೆ ಮಧ್ಯರಾತ್ರಿವರೆಗೂ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಅವರು ಜಯಮಹಲ್‍ನಲ್ಲಿ ಬೆಂಗಳೂರು ಅರಮನೆ ಸಮೀಪದ ರಸ್ತೆಗುಂಡಿ ಮುಚ್ಚಿರುವ ಕಾಮಗಾರಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಗುಂಡಿ ಮುಚ್ಚದಿರುವುದನ್ನು ಗಮನಿಸಿದ ಮೇಯರ್ ಅವರು ಕೂಡಲೇ ಅಧಿಕಾರಿಗಳನ್ನು ಕರೆದು ರಸ್ತೆಗುಂಡಿ ಮುಚ್ಚಿರುವ ಗುತ್ತಿಗೆದಾರರಿಗೆ ಒಂದು ಲಕ್ಷ ರೂ. ದಂಡ ವಿಧಿಸುವಂತೆ ಸ್ಥಳದಲ್ಲೇ ಆದೇಶಿಸಿದರು.
ಅದೇ ರೀತಿ ಪೂರ್ವ ವಲಯದಲ್ಲಿ ಬೀದಿ ದೀಪ ನಿರ್ವಹಣೆ ಮಾಡದ ಎಲೆಕ್ಟ್ರಿಕ್ ಗುತ್ತಿಗೆದಾರರಿಗೂ 50 ಸಾವಿರ ರೂ. ದಂಡ ವಿಧಿಸುವಂತೆ ಸೂಚನೆ ನೀಡಿದರು.
ಗಂಗಾನಗರ ಅಂಡರ್‍ಪಾಸ್ ಸಮೀಪ ಅಳವಡಿಸಲಾಗಿದ್ದ ಪಿಒಪಿ ಸೀಲಿಂಗ್‍ಅನ್ನು ತೆರವುಗೊಳಿಸುವಂತೆ ಮೇಯರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಂತಿನಗರ ಸುತ್ತಮುತ್ತ ಅಳವಡಿಸಲಾಗಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಸೂಚಿಸಿದರು.
ರಾತ್ರಿ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ನಗರ ಪ್ರದಕ್ಷಿಣೆ ಆರಂಭಿಸಿದ ಮೇಯರ್ ಗಂಗಾಂಬಿಕೆ ಅವರು 12.30ರ ವರೆಗೂ ವಿವಿಧ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಉಪಮೇಯರ್ ರಮಿಳಾ ಉಮಾಶಂಕರ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮತ್ತಿತರರು ಮೇಯರ್ ಜತೆಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ