ಬೆಂಗಳೂರು, ಅ.3-ಪರಿಸರ ಸಂರಕ್ಷಣೆ ಬಗ್ಗೆ ಇಂದಿನ ಪೀಳಿಗೆಯವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮಾಜಮುಖಿ ಫೌಂಡೇಷನ್ ಸಂಸ್ಥೆ ವತಿಯಿಂದ ಹಸಿರೇ ನಮ್ಮ ಉಸಿರು ಸಾಕ್ಷ್ಯ ಚಿತ್ರವನ್ನು ಸಿದ್ದಪಡಿಸಿದ್ದು, ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಸಮಾಜಮುಖಿ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಬ್ರಹ್ಮ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಈ ಸಾಕ್ಷ್ಯ ಚಿತ್ರದ ಮಹತ್ವವನ್ನು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ತಿಳಿಸಿ ಅವರ ಅನುಮತಿ ಪಡೆದು ನಗರಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಂತೇಶ್ ಬ್ರಹ್ಮ, ಸಮಾಜಮುಖಿ ಫೌಂಡೇಷನ್ ಸಂಸ್ಥೆ ವತಿಯಿಂದ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ಈ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದೇನೆ. ಇದಕ್ಕೆ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರು ಸ್ಫೂರ್ತಿ ಎಂದು ತಿಳಿಸಿದರು.
ನಿಸ್ವಾರ್ಥವಾಗಿ ತಮ್ಮ ಇಡೀ ಜೀವನವನ್ನೇ ಪರಿಸರ ಸೇವೆಗಾಗಿ ಸಾಲುಮರದ ತಿಮ್ಮಕ್ಕ ಮುಡಿಪಾಗಿಟ್ಟಿದ್ದಾರೆ. ಅದಕ್ಕಾಗಿ ಈ ಸಾಕ್ಷ್ಯ ಚಿತ್ರವನ್ನು ಅವರಿಗೆ ಸಮರ್ಪಿಸಿದ್ದೇನೆ. ತಿಮ್ಮಕ್ಕನವರ ಪರಿಸರ ಪ್ರೀತಿ ಇಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.
ನಾವೆಲ್ಲ ಪರಿಸರ ಕಾಳಜಿ ಬೆಳೆಸಿಕೊಳ್ಳದಿದ್ದರೆ ಮುಂದೆ ಮನುಕುಲ ದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ನೀಡಿದರು.
ಪೆÇಲೀಯೋ ಕಾಯಿಲೆಯಿಂದ ಬಳಲುತ್ತಿರುವ ನಾನು ವಿಕಲಚೇತನ. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಹಸಿರೇ ನಮ್ಮ ಉಸಿರು ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದೇನೆ. ಎಲ್ಲ ಶಾಲಾಕಾಲೇಜುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಪ್ರದರ್ಶಿಸುವ ಗುರಿ ಹೊಂದಿದ್ದೇನೆ. ಇದಕ್ಕೆ ಬಿಬಿಎಂಪಿ ಸಹಾಯ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.